ಮುನಿರಾಬಾದ್‌ನಲ್ಲಿ ಶ್ರೀ ಹುಲಿಗೆಮ್ಮದೇವಿ ರೈಲ್ವೆ ನಿಲ್ದಾಣಕ್ಕೆ ಒತ್ತಾಯ

| Published : Feb 27 2024, 01:33 AM IST

ಮುನಿರಾಬಾದ್‌ನಲ್ಲಿ ಶ್ರೀ ಹುಲಿಗೆಮ್ಮದೇವಿ ರೈಲ್ವೆ ನಿಲ್ದಾಣಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ, ಯಾತ್ರಾ ಕೇಂದ್ರವಾಗಿದೆ.

ಹೊಸಪೇಟೆ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯ ಮುನಿರಾಬಾದ್ ರೈಲ್ವೆ ನಿಲ್ದಾಣಕ್ಕೆ “ಶ್ರೀ ಹುಲಿಗೆಮ್ಮದೇವಿ ರೈಲ್ವೆ ನಿಲ್ದಾಣ” ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಸೋಮವಾರ ಒತ್ತಾಯಿಸಿದರು.

ಅಮೃತ್‌ ಭಾರತ್ ರೈಲ್ವೆ ನಿಲ್ದಾಣ ಯೋಜನೆ ಅಡಿಯಲ್ಲಿ ಮುನಿರಾಬಾದ್ ರೈಲ್ವೆ ನಿಲ್ದಾಣವು ಸಹ ಸೇರಿಸಲಾಗಿದ್ದು, ಅದರ ನವೀಕರಣ ಹಾಗೂ ಇಲ್ಲಿಯ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಎಲ್‌ಸಿ ಗೇಟ್ ನಂ. 79, ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಗಾಗಿ ಮುನಿರಾಬಾದ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಂಸದರಿಗೆ ಮನವಿ ಸಲ್ಲಿಸಿದರು.

ಹುಲಿಗೆಮ್ಮ ದೇವಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ, ಯಾತ್ರಾ ಕೇಂದ್ರವಾಗಿದೆ ತುಂಗಭದ್ರಾ ನದಿಯ ದಂಡೆಯ ಮೇಲೆ ಪ್ರತಿಷ್ಠಾಪನೆಯಾಗಿರುವ ದೇವಸ್ಥಾನವು ಅತ್ಯಂತ ಪ್ರಾಚೀನ ಶಕ್ತಿಕೇಂದ್ರವಾಗಿದ್ದು, ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದೆ. ಚಾರಿತ್ರಿಕ ಭೌಗೋಳಿಕ ಆಡಳಿತಾತ್ಮಕ ವಾಸ್ತವಾಂಶಗಳಿರುವಾಗ ರೈಲ್ವೆ ನಿಲ್ದಾಣಕ್ಕೆ ಮಾತ್ರ ಮುನಿರಾಬಾದ್ ಎಂಬ ಹೆಸರಿನಿಂದ ಕರೆಯುವುದು ಸೂಕ್ತವಲ್ಲ. ದೇಶದಲ್ಲಿ ಅನೇಕ ನಗರ ಗ್ರಾಮಗಳ ಹೆಸರನ್ನು ಆ ಪ್ರದೇಶದ ಚಾರಿತ್ರಿಕ ಭೌಗೋಳಿಕ ಹಿನ್ನಲೆಗಳನ್ನು ಮಾನದಂಡವಾಗಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಆದ್ದರಿಂದ ಮುನಿರಾಬಾದ್ ಎಂಬ ಹೆಸರನ್ನು ಬದಲಿಸಿ ಶ್ರೀ ಹುಲಿಗೆಮ್ಮ ದೇವಿ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಹುಲಿಗಿ(ಹಿಟ್ನಾಳ್) ಬೂದುಗುಂಪಾ ನಡುವೆ ನೂತನವಾಗಿ ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕು. ಗಂಗಾವತಿ- ಸಿಂಧನೂರು ತಾಲೂಕುಗಳಿಂದ ಹೊಸಪೇಟೆ- ದಾವಣಗೆರೆ-ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳಿಗೆ ತ್ವರಿತವಾಗಿ ಸಂಪರ್ಕ ಕಲ್ಪಿಸಲು ಬೈಪಾಸ್ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಬೈಪಾಸ್ ಮಾರ್ಗ ನಿರ್ಮಾಣದಿಂದ ಗಿಣಿಗೇರಾದಲ್ಲಿ ರೈಲು ಎಂಜಿನ್ ರಿವರ್ಸ್ ಮಾಡುವ ತೊಂದರೆ ತಪ್ಪಿದಂತಾಗುತ್ತದೆ ಹಾಗೂ ಬೂದುಗುಂಪಾದಿಂದ ನೇರ ಸಂಪರ್ಕ ದೊರೆತು ಸುಗಮ ಸಂಚಾರಕ್ಕೆ ಅವಕಾಶ ದೊರಕಿದಂತಾಗಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ವೈ. ಯಮುನೇಶ್, ಮಹೇಶ್‌ ಕುಡತಿನಿ, ಉಮಾಮಹೇಶ್ವರ್, ಕೌತಾಳ್ ವಿಶ್ವನಾಥ ಮತ್ತಿತರರಿದ್ದರು.