ಹಂಪಿಯಲ್ಲಿ ಹರಿಗೋಲು ಸವಾರಿಗೆ ಡಿಮ್ಯಾಂಡ್‌

| Published : Dec 09 2024, 12:47 AM IST

ಸಾರಾಂಶ

ದೇಶ, ವಿದೇಶಿ ಪ್ರವಾಸಿಗರು ಹರಿಗೋಲು ಸವಾರಿ ಮಾಡಲು ಹಾತೊರೆಯುತ್ತಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹಂಪಿಯ ತುಂಗಭದ್ರಾ ನದಿ ತೀರದಲ್ಲಿ ಹರಿಗೋಲು ಸವಾರಿ ಪ್ರವಾಸೋದ್ಯಮಕ್ಕೆ ಈಗ ಭಾರೀ ಬೇಡಿಕೆ ಬಂದಿದೆ. ಅದರಲ್ಲೂ ದೇಶ, ವಿದೇಶಿ ಪ್ರವಾಸಿಗರು ಹರಿಗೋಲು ಸವಾರಿ ಮಾಡಲು ಹಾತೊರೆಯುತ್ತಿದ್ದಾರೆ.

ಈ ಬಾರಿ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹರಿಗೋಲು ಸವಾರಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಗೊಂಡಿದ್ದು, ದೇಶ, ವಿದೇಶಿ ಪ್ರವಾಸಿಗರು ಹರಿಗೋಲಿನಲ್ಲಿ ಸವಾರಿ ಮಾಡಿ ಖುಷಿಪಡುತ್ತಿದ್ದಾರೆ.

ಹಂಪಿ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಲ್ಲಿ ಹರಿಗೋಲು ಸವಾರಿಯನ್ನು 18 ಮೀನುಗಾರರು ನಡೆಸುತ್ತಿದ್ದಾರೆ. ಈ ಮೀನುಗಾರರು 10 ಹರಿಗೋಲುಗಳನ್ನು ಬಳಸಿ, ದೇಶ, ವಿದೇಶಿ ಪ್ರವಾಸಿಗರಿಗೆ ಹರಿಗೋಲು ಸವಾರಿ ಮಾಡಿಸುತ್ತಿದ್ದಾರೆ.

ಹಂಪಿಯಲ್ಲಿ ಹೊಸ ಮಾದರಿಯ ಪ್ರವಾಸೋದ್ಯಮ ಬೆಳೆಯುತ್ತಿದ್ದು, ಸ್ಮಾರಕಗಳ ವೀಕ್ಷಣೆಗೆ ಹರಿಗೋಲು ಸವಾರಿ ಮಾಡುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಪ್ರವಾಸಿಗರ ಬೇಡಿಕೆಗೆ ಅನುಸಾರವಾಗಿ ಸ್ಥಳೀಯ ಮೀನುಗಾರರು ನದಿಯಲ್ಲಿ ಹರಿಗೋಲಿನಲ್ಲಿ ಸವಾರಿ ಮಾಡಿಸುತ್ತಿದ್ದಾರೆ.

ಹರಿಗೋಲು ಪಯಣ:

ಹಂಪಿಯ ಕೋದಂಡರಾಮ ದೇವಾಲಯದ ಬಳಿಯ ಚಕ್ರತೀರ್ಥ ಪ್ರದೇಶದಿಂದ ಋಷಿಮುಖ ಪರ್ವತದ ವರೆಗೆ ಹರಿಗೋಲು ಪಯಣ ನಡೆಯಲಿದೆ. ತುಂಗಭದ್ರಾ ನದಿಯಲ್ಲಿ ಮೀನುಗಾರರು ಸವಾರಿ ಮಾಡಿಸುತ್ತಾರೆ. ಸುತ್ತ ಬೆಟ್ಟಗುಡ್ಡಗಳು, ಸ್ಮಾರಕಗಳ ಮಧ್ಯದಲ್ಲಿ ಈ ಪಯಣ ನಡೆಯಲಿದೆ. ಮೀನುಗಾರರು 45 ನಿಮಿಷದ ವರೆಗೆ ಸವಾರಿ ಮಾಡಿಸುತ್ತಾರೆ. ಒಬ್ಬರಿಗೆ ತಲಾ ₹200 ಶುಲ್ಕ ಇದೆ. ಹಂಪಿ ಸ್ಮಾರಕಗಳ ವೈಭವವನ್ನು ಪ್ರವಾಸಿಗರು ಹರಿಗೋಲಿನಲ್ಲಿ ಕುಳಿತುಕೊಂಡು ಕಣ್ದುಂಬಿಕೊಳ್ಳುತ್ತಾರೆ.

ಹಂಪಿಯ ಚಕ್ರತೀರ್ಥದ ಬಳಿ ಹರಿಗೋಲು ಸೇವೆ ನೀಡುವುದಕ್ಕೆ ಬುಕ್ಕಸಾಗರ ಗ್ರಾಪಂ ಹರಾಜು ಹಾಕಿದೆ. ವಾರ್ಷಿಕ ₹10 ಲಕ್ಷಕ್ಕೆ ಈ ಹರಾಜು ಗುತ್ತಿಗೆಯನ್ನು ಮೀನುಗಾರರು ಪಡೆದಿದ್ದಾರೆ.

ಜಲಾಶಯದಿಂದ ಈ ವರ್ಷ ನಿರಂತರ ನೀರು ಬಿಟ್ಟ ಹಿನ್ನೆಲೆಯಲ್ಲಿ ಹರಿಗೋಲು ಸೇವೆ ಕೂಡ ಸ್ಥಗಿತಗೊಂಡಿತ್ತು. ಈಗ ಮತ್ತೆ ಮೀನುಗಾರರು ಆರಂಭಿಸಿದ್ದು, ದೇಶ, ವಿದೇಶಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಹರಿಗೋಲು ಸವಾರಿ ಮಾಡುತ್ತಿದ್ದಾರೆ. ಇದರಿಂದ ಹೊಸ ಆಯಾಮದ ಪ್ರವಾಸೋದ್ಯಮ ಆರಂಭಗೊಂಡಿದೆ.

ಹಂಪಿಯಲ್ಲಿ ನಡೆದ ಜಿ-20 ಶೃಂಗಸಭೆ ವೇಳೆಯೂ ದೇಶ, ವಿದೇಶಿ ರಾಯಭಾರಿಗಳು ಹರಿಗೋಲು ಸವಾರಿ ಮಾಡಿ, ಈ ಮೀನುಗಾರರಿಗೆ ಶಹಬ್ಬಾಸ್‌ ಗಿರಿ ನೀಡಿದ್ದರು. ಹಂಪಿಗೆ ಆಗಮಿಸುವ ಗಣ್ಯಾತಿಗಣ್ಯರು, ವಿದೇಶಿ ರಾಯಭಾರಿಗಳು ಕೂಡ ಹರಿಗೋಲು ಸವಾರಿ ಮಾಡುತ್ತಿದ್ದಾರೆ. ಈ ಮೀನುಗಾರರು ಹಂಪಿ ಪ್ರದೇಶದಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರು ಆಯತಪ್ಪಿ ಬಿದ್ದರೆ ತಕ್ಷಣವೇ ಲೈಫ್‌ ಜಾಕೆಟ್‌ ಧರಿಸಿ ರಕ್ಷಣೆಗೆ ಧಾವಿಸುತ್ತಾರೆ.

ತುಂಗಭದ್ರಾ ನದಿಯಲ್ಲಿ ಹರಿಗೋಲಿನಲ್ಲಿ ತೆರಳಿ ಸ್ಮಾರಕಗಳನ್ನು ವೀಕ್ಷಣೆ ಮಾಡುವುದು ಖುಷಿ ವಿಚಾರವಾಗಿದೆ. ನಾನು ಕಳೆದ ಸಲ ಬಂದಾಗ ಹರಿಗೋಲು ಸವಾರಿ ತಪ್ಪಿಸಿಕೊಂಡಿದ್ದೆ. ಈ ಬಾರಿ ಕುಟುಂಬ ಸಮೇತ ಸವಾರಿ ಮಾಡಿರುವೆ ಎನ್ನುತ್ತಾರೆ ಪ್ರವಾಸಿಗ ನವೀನ್‌ರಾಜ್‌.

ಹರಿಗೋಲು ಸವಾರಿಗೆ ದೇಶ, ವಿದೇಶಿ ಪ್ರವಾಸಿಗರು ಇಷ್ಟ ಪಡುತ್ತಿದ್ದಾರೆ. ನಾವು 45 ನಿಮಿಷಗಳ ವರೆಗೆ ಹರಿಗೋಲು ಸವಾರಿ ಮಾಡಿಸುತ್ತೇವೆ. ಅವರು ಈ ಸವಾರಿಯಲ್ಲಿ ಹಂಪಿ ಪರಿಸರ ಕಂಡು ಸಂತಸಪಡುತ್ತಿದ್ದಾರೆ ಎನ್ನುತ್ತಾರೆ ಹಂಪಿಯ ಮೀನುಗಾರ ಎಲ್‌.ಪೀರು ನಾಯ್ಕ.