ಸಾರಾಂಶ
ತಹಸೀಲ್ದಾರ್ ಡಾ.ನೂರಲ್ ಹುದಾ ಮೂಲಕ ರಾಷ್ಟ್ರಪತಿಗಳಿಗೆ ಡಿಎಸ್ ಎಸ್ ಮನವಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಅವರ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಹಸೀಲ್ದಾರ್ ಡಾ.ನೂರಲ್ ಹುದಾ ಮೂಲಕ ರಾಷ್ಟ್ರಪತಿಗಳಿಗೆ ಬುಧವಾರ ಮನವಿ ಪತ್ರ ಅರ್ಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ.ಭವಾನಿ ಮಾತನಾಡಿ, ಭಾರತ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಸರ್ವ ಶ್ರೇಷ್ಠವಾಗಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಿಜೆಐ ಬಿ.ಆರ್. ಗವಾಯಿ ಅವರ ಶೂ ಎಸೆದಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ. ಆರೋಪಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ವೆಂಕಟೇಶ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ನೀಡುತ್ತಿದ್ದೇವೆ ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ರಾಜೇಶ್ ಮಾತನಾಡಿ, ನ್ಯಾಯಾಧೀಶರ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ಅವರನ್ನು ದೇಶ ದ್ರೋಹಿ ಎಂದ ಪರಿಗಣಿಸಿ ಪ್ರಕರಣ ದಾಖಲಿಸಬೇಕು. ನ್ಯಾಯಾಧೀಶರಿಗೆ ಸೂಕ್ತ ರಕ್ಷಣೆ ನೀಡಬೇಕು. ದಲಿತ ನ್ಯಾಯಮೂರ್ತಿಗಳನ್ನು ಗುರಿಯಾಗಿಟ್ಟುಕೊಂಡ ವಿಕೃತ ಮನಸ್ಸಿನ ಕೋಮುವಾದಿ ವಕೀಲನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಅಬ್ದುಲ್ ರೆಹಮಾನ್, ತಾಲೂಕು ಸಂಚಾಲಕ ಸಿಜು, ತಾಲೂಕು ಸಂಘಟನಾ ಸಂಚಾಲಕ ರಾಜು, ಡಿ.ಎಸ್.ಎಸ್. ಮುಖಂಡರಾದ ಸಿದ್ದಪ್ಪ, ರವಿ, ಕುಮಾರ್ ಇದ್ದರು.