ಮಗೆ ಬೇಕಾದವರನ್ನು ರಕ್ಷಣೆ ಮಾಡಿ ಬೇಡವಾಗಿದ್ದವರ ಮೇಲೆ ಕೇಸ್ ದಾಖಲಿಸುವುದು, ಹಣ ವಸೂಲಿ ಮಾಡುವುದು ನಿರಂತರವಾಗಿ ನಡೆಯುತ್ತಿದೆ

ಕನಕಗಿರಿ: ಬಸವರಾಜರೆಡ್ಡಿ ಸಾವಿಗೆ ಕಾರಣರಾದ ಪಪಂ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಆಗ್ರಹಿಸಿದ್ದಾರೆ.

ಈ ಕುರಿತು ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿ, ಆ. ೧೧ ಮತ್ತು ೧೨ರಂದು ಸಂಜೆ ಸಮಯದಲ್ಲಿ ಬಸವರಾಜರೆಡ್ಡಿ ಮನೆಗೆ ತೆರಳಿದ ಆರೋಪಿತರು ನಿವೇಶನ ನೀಡದಿದ್ದರೆ ಹೆಂಡತಿ, ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಆ.೧೩ರಂದು ಪೊಲೀಸ್ ಠಾಣೆ ಹಾಗೂ ಪಪಂಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳದೇ ನಿರ್ಲಕ್ಷವಹಿಸಿದ್ದಕ್ಕಾಗಿ ಮತ್ತು ಬಂಧಿತರಾದವರ ನಿರಂತರ ದೌರ್ಜನ್ಯ, ಜೀವ ಬೆದರಿಕೆಯಿಂದ ಆ.೧೫ರಂದು ಬಸವರಾಜರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಇಲಾಖೆಗಳ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದೆಷ್ಟೊ ಸಾರ್ವಜನಿಕರು ಸಲ್ಲಿಸಿದ ಮನವಿ ಪಪಂ ಸಿಬ್ಬಂದಿ ಕಸದ ಬುಟ್ಟಿಗೆ ಹಾಕಿದ್ದಾರೆ. ಇನ್ನೂ ಫಾರಂ-೩ ನೀಡಲು ೧೦ ಹಾಗೂ ₹೫ ಸಾವಿರ ಲಂಚ ಪಡೆಯುತ್ತಿದ್ದಾರೆ. ಓರ್ವ ಸಿಬ್ಬಂದಿ ₹೯ ಸಾವಿರ ನೀಡಿದರೆ ನಮೂನೆ ೩ ಕೊಡುವುದಾಗಿ ಹೇಳುತ್ತಾನೆ. ಪಪಂನಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಪೊಲೀಸ್ ಠಾಣೆಯಲ್ಲಿಯೂ ಹಲವು ವರ್ಷಗಳಿಂದ ಕೆಲ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ತಮಗೆ ಬೇಕಾದವರನ್ನು ರಕ್ಷಣೆ ಮಾಡಿ ಬೇಡವಾಗಿದ್ದವರ ಮೇಲೆ ಕೇಸ್ ದಾಖಲಿಸುವುದು, ಹಣ ವಸೂಲಿ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇನ್ನೂ ಕೆಲ ಪೊಲೀಸರು ಮುಗ್ದರು ಠಾಣೆಗೆ ಬಂದರೆ ಸಾಕು ಯೋಜನೆ ರೂಪಿಸಿ ಹಣ ಕೀಳುತ್ತಾರೆ. ಇಂತಹ ಸಂದರ್ಭದಲ್ಲಿ ಬಡವರಿಗೆ ನ್ಯಾಯ ಸಿಗುವುದಾದರೆ ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ. ಅದಕ್ಕಾಗಿ ತಪ್ಪಿತಸ್ಥ ಪಪಂ ಹಾಗೂ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಿ ಸಾರ್ವಜನಿಕರು ಅನುಭವಿಸುವ ನರಕಯಾತನೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.