ತೋಟಗಾರಿಕೆ ತಾಂತ್ರಿಕ ಸಹಾಯಕನ ಅಮಾನತಿಗೆ ಆಗ್ರಹ

| Published : Oct 23 2024, 12:35 AM IST

ಸಾರಾಂಶ

Demand for suspension of Horticulture Technical Assistant

-ತೋಟಗಾರಿಕೆ ಕಚೇರಿಗೆ ಬೀಗ ಮುದ್ರೆ ಹಾಕಿ ಉಗ್ರ ಹೋರಾಟಕ್ಕೆ ದಸಂಸ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಸುರಪುರ

ನರೇಗಾ ಯೋಜನೆಯಡಿ ಯಾವುದೇ ಕ್ರಿಯಾಯೋಜನೆ ಇಲ್ಲದೇ ಫಲಾನುಭವಿಗಳಿಂದ ಲಂಚ ಪಡೆದುಕೊಂಡು ಕಾಮಗಾರಿ ದಾಖಲಿಸುತ್ತಿರುವ ತೋಟಗಾರಿಕೆ ತಾಂತ್ರಿಕ ಸಹಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆಯಿಂದ ಪ್ರತಿಭಟಿಸಿ ಸಹಾಯಕ ಹಿರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿ, ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಹಣ ನೀಡಿದವರಿಗೆ ಮಾತ್ರ ಖೊಟ್ಟಿ ಬಿಲ್ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಯ ತಾರತಮ್ಯ ನೀತಿಯಿಂದಾಗಿ ಕೂಲಿ- ಕಾರ್ಮಿಕರ ಮಾನವ ದಿನಗಳ ಸಂಖ್ಯೆ ಹಾಳಾಗುತ್ತಿವೆ. ಬಡ ಕೂಲಿ ಕಾರ್ಮಿಕರು ಹಾಗೂ ರೈತರಿಗೆ ತುಂಬಾ ಮಾರಕವಾಗುತ್ತಿದೆ. ಈ ಬಗ್ಗೆ ಜಾಲಿಬೆಂಚಿ ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿದರೂ ಸಹಾಯಕ ತೋಟಗಾರಿಕೆ ನಿರ್ದೇಶಕರು ನಿರ್ಲಕ್ಷ್ಯವಹಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಜಾಲಿಬೆಂಚಿ ಗ್ರಾಮಸ್ಥರೊಂದಿಗೆ ತೋಟಗಾರಿಕೆ ಕಚೇರಿಗೆ ಬೀಗ ಮುದ್ರೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಎಂ. ಪಟೇಲ, ಚನ್ನಬಸಪ್ಪ ತಳವಾರ, ಶೇಖರ ಮಂಗಳೂರು, ರಾಜು ಬಡಿಗೇರಾ, ವೆಂಕಟೇಶ ದೇವಾಪುರ, ದೇವೇಂದ್ರ ಬಡಿಗೇರ, ರಮೇಶ ಬಡಿಗೇರ, ಹಣಮಂತ ರತ್ತಾಳ, ಹಣಮಂತ ದೇವಾಪುರ ಇದ್ದರು.

----

22ವೈಡಿಆರ್2: ಸುರಪುರ ನರೇಗಾದಲ್ಲಿ ಅಕ್ರಮ ಎಸಗುತ್ತಿರುವ ತಾಂತ್ರಿಕ ಸಹಾಯಕನನ್ನು ಅಮಾನತಿಗೆ ಒತ್ತಾಯಿಸಿ ದಸಂಸ ತಾಲೂಕು ಸದಸ್ಯರು ತೋಟಗಾರಿಕೆ ಅಧಿಕಾರಿಗೆ ಮನವಿ ಸಲ್ಲಿಸಿದರು.