ನೀರು ಸಂಗ್ರಹಿಸುವಲ್ಲಿ ವಿಫಲರಾದ ಅಧಿಕಾರಿಗಳ ಅಮಾನತಿಗೆ ಒತ್ತಾಯ

| Published : Apr 27 2024, 01:19 AM IST / Updated: Apr 27 2024, 11:29 AM IST

ನೀರು ಸಂಗ್ರಹಿಸುವಲ್ಲಿ ವಿಫಲರಾದ ಅಧಿಕಾರಿಗಳ ಅಮಾನತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮುದೇನೂರ ತುಂಗಭದ್ರಾ ನದಿ ಜಾಕ್‌ವೆಲ್ ಬಳಿ ನಗರಕ್ಕೆ ನೀರು ಪೂರೈಸುವ ಸಲುವಾಗಿ ಮರಳಿನ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ

ರಾಣಿಬೆನ್ನೂರು: ತಾಲೂಕಿನ ಮುದೇನೂರ ತುಂಗಭದ್ರಾ ನದಿ ಜಾಕ್‌ವೆಲ್ ಬಳಿ ನಗರಕ್ಕೆ ನೀರು ಪೂರೈಸುವ ಸಲುವಾಗಿ ಮರಳಿನ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು ಉಪ ತಹಸೀಲ್ದಾರ್ ಮೋಹನ ಕಡೂರ ಮೂಲಕ ಪ್ರಾದೇಶಿಕ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗ ರೈತ ಸಂಘಟನೆ ವತಿಯಿಂದ ತಾಲೂಕಿನ ಮಾಕನೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಭದ್ರಾ ಡ್ಯಾಂನಿಂದ ಎರಡು ಟಿಎಂಸಿ ನೀರನ್ನು ತುಂಗಭದ್ರಾ ನದಿಗೆ ಹರಿಸಿತ್ತು. 

ಈ ನೀರನ್ನು ಎರಡು ತಿಂಗಳಿಗೆ ಸಾಕಾಗುಷ್ಟು ಮರಳಿನ ತಡೆಗೋಡೆ ನಿರ್ಮಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಅದರಂತೆ ಲಕ್ಷಾಂತರ ರು. ಖರ್ಚು ಮಾಡಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ನಗರಸಭೆಯ ತಾಂತ್ರಿಕ ವರ್ಗದವರ ನಿರ್ಲಕ್ಷ್ಯತನ, ಅವೈಜ್ಞಾನಿಕ ನೀತಿ, ಕಳಪೆ ಕಾಮಗಾರಿಯಿಂದ ನೀರು ಸಂಗ್ರಹವಾಗದೆ ಸಂಪೂರ್ಣ ನೀರು ಪೋಲಾಯಿತು. 

ಹೀಗಾಗಿ ಪುನಃ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಬೇಕಾಯಿತು. ಆದ್ದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಇಂಥ ಮರಳಿನ ಚೀಲದ ತಡೆಗೋಡೆ ಕಾಮಗಾರಿಯಲ್ಲಿಯೂ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಿಸಬೇಕು. ಈಗ ವಿನಾಃಕಾರಣ ಹರಿಯುತ್ತಿರುವ ಈ ನೀರನ್ನಾದರೂ ತಾಂತ್ರಿಕತೆ ಬಳಸಿ ನೀರನ್ನು ನಿಲ್ಲಿಸಿ ಕನಿಷ್ಠ ಎರಡು ತಿಂಗಳಿಗಾಗುವಷ್ಟು ನೀರನ್ನು ಸಂಗ್ರಹಿಸಬೇಕು ಎಂದರು. ದೇವರಾಜ ಜೇಗ್ಲಿ, ಚಂದ್ರಪ್ಪ ಮಾಳಗಾರ, ಷಣ್ಮುಖನಗೌಡ ಗಂಗನಗೌಡ್ರ, ಹುಸೇನ್‌ಸಾಬ ದೊಡ್ಮನಿ, ಬುಳ್ಳಪ್ಪ ಬಾವಿಕಟ್ಟಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ ಇದ್ದರು.