ರಾಹುಲ್‌ ಗಾಂಧಿ, ಕಲ್ಯಾಣ ಬ್ಯಾನರ್ಜಿ ಅಮಾನತಿಗೆ ಒತ್ತಾಯ

| Published : Dec 22 2023, 01:30 AM IST

ರಾಹುಲ್‌ ಗಾಂಧಿ, ಕಲ್ಯಾಣ ಬ್ಯಾನರ್ಜಿ ಅಮಾನತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ತಿನಲ್ಲಿ ಉಪರಾಷ್ಟ್ರಪತಿಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಉಪ ರಾಷ್ಟ್ರಪತಿಗಳಿಗೆ ಅವಮಾನಿಸುವ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಾರೆ.

ಹುಬ್ಬಳ್ಳಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಹಾಗೂ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ನಡೆ ಖಂಡಿಸಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತರು ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಮಾತನಾಡಿ, ಸಂಸತ್ತಿನಲ್ಲಿ ಉಪರಾಷ್ಟ್ರಪತಿಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರು ಉಪ ರಾಷ್ಟ್ರಪತಿಗಳಿಗೆ ಅವಮಾನಿಸುವ ಮೂಲಕ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಹಾಗೂ ಜನಪ್ರೀಯತೆ ಕಂಡು ಕಾಂಗ್ರೆಸ್ಸಿಗೆ ಈಗಾಗಲೇ ನಡುಕ ಪ್ರಾರಂಭವಾಗಿದೆ. ಹಾಗಾಗಿ ಸಂಸತ್ತಿನಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಉಪರಾಷ್ಟ್ರಪತಿಗಳನ್ನು ಅವಮಾನಿಸುವ ಕಾರ್ಯಕ್ಕೆ ಮುಂದಾಗಿರುವ ಕಾಂಗ್ರೆಸ್‌ ಹಾಗೂ ಟಿಎಂಸಿ ಸಂಸದರ ಈ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ಸಂಸತ್ತಿನಲ್ಲಿ ಸಂಸದರು ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್ ಹಾಗೂ ಟಿಎಂಸಿ ನಾಯಕರಿಗೆ ಆಯಾ ಪಕ್ಷದ ವರಿಷ್ಠರು ಅಭ್ಯಾಸ ವರ್ಗ ನಡೆಸುವ ಮೂಲಕ ತಿಳಿ ಹೇಳುವ ಕಾರ್ಯ ಮಾಡಬೇಕು. ಇದಲ್ಲದೇ ಉಪರಾಷ್ಟ್ರಪತಿಗಳನ್ನು ಅವಮಾನಿಸಿರುವ ಸಂಸದರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಹು-ಧಾ ಮಹಾನಗರ ಪಾಲಿಕೆ ಹಿರಿಯ ಸದಸ್ಯ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ರವಿ ನಾಯಕ, ಸತೀಶ ಶೇಜವಾಡಕರ್, ಈಶ್ವರಗೌಡ ಪಾಟೀಲ್, ರಾಜು, ಮಾಲತೇಶ ಶ್ಯಾಗೋಟಿ, ಗುರು ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.