ಚೆನ್ನಮ್ಮ ಜಯಂತಿ ಆಚರಿಸದ ತಹಸೀಲ್ದಾರ್ ಅಮಾನತಿಗೆ ಆಗ್ರಹ

| Published : Oct 24 2025, 01:00 AM IST

ಸಾರಾಂಶ

ಈ ವೇಳೆ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ತಡವಾದರೂ ಜಯಂತಿ ಆಚರಣೆ ಮಾಡಿಲ್ಲ ಎಂಬ ಮಾಹಿತಿಯಿಂದ ಗಲಿಬಿಲಿಗೊಂಡು ಫೋಟೋ ಇಟ್ಟು ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದರು.

ಲಕ್ಷ್ಮೇಶ್ವರ: ಇಲ್ಲಿನ ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಅವರು ತಮ್ಮ ಕಚೇರಿಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ ಮಾಡದೆ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಗುರುವಾರ ತಹಸೀಲ್ದಾರ್ ಕಚೇರಿಯ ಮುಂದೆ ಪಂಚಮಸಾಲಿ ಸಮಾಜದವರು ಹಾಗೂ ವಿವಿಧ ಸಂಘಟನೆಯೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ತಡವಾದರೂ ಜಯಂತಿ ಆಚರಣೆ ಮಾಡಿಲ್ಲ ಎಂಬ ಮಾಹಿತಿಯಿಂದ ಗಲಿಬಿಲಿಗೊಂಡು ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ತಹಸೀಲ್ದಾರರು ಸ್ಥಳೀಯವಾಗಿಯೇ ಇದ್ದರೂ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿಲ್ಲ. ಜಯಂತಿ ಆಚರಣೆಯ ಕುರಿತು ಯಾವುದೇ ಸಭೆಯನ್ನೂ ಮಾಡಿಲ್ಲ ಮತ್ತು ಯಾರೊಬ್ಬರನ್ನೂ ಆಹ್ವಾನಿಸಿಲ್ಲ. ಇದು ಅವರ ನಿರ್ಲಕ್ಷ್ಯತನ ಹಾಗೂ ಸರ್ಕಾರದ ಆದೇಶ ಧಿಕ್ಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇದು ಸ್ವಾತಂತ್ರ್ಯ ಭಾರತದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮಾಜಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ತಹಸೀಲ್ದಾರರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ಕರವೇ(ನಾರಾಯಣಗೌಡ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಸಂಗೊಳ್ಳಿ ರಾಯಣ್ಣ ವೇದಿಕೆಯ ಮಂಜು ಮುಳಗುಂದ, ಪ್ರಕಾಶ ಮಾದನೂರ, ಲೋಕೇಶ ಸುತಾರ, ಹೊನ್ನಪ್ಪ ವಡ್ಡರ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಅನೇಕರು ತಹಸೀಲ್ದಾರರನ್ನು ಅಮಾನತು ಮಾಡಲೇಬೇಕು. ಅಂದಾಗ ಇದು ಉಳಿದವರಿಗೆ ಪಾಠವಾಗುತ್ತದೆ ಎಂದು ಪಟ್ಟು ಹಿಡಿದರು. ಬಟ್ಟೂರ ಗ್ರಾಪಂನಲ್ಲಿಯೂ ಜಯಂತಿ ಆಚರಣೆ ನಿರ್ಲಕ್ಷಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಮಂಜುನಾಥ ಗೌರಿ ಆರೋಪಿಸಿದರು. ಸುದ್ದಿ ತಿಳಿದು ಆಗಮಿಸಿದ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಎಫ್.ವಿ. ಮರಿಗೌಡರ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಠಿ, ಶಿರಹಟ್ಟಿ ತಾಲೂಕಾಧ್ಯಕ್ಷ ಬಸವರಾಜ ತುಳಿ, ರಾಜ್ಯ ಸಂಚಾಲಕ ಸೋಮಣ್ಣ ಡಾಣಗಲ್, ಶರಣಪ್ಪ ಹೊಂಬಳ, ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಹೊನ್ನಪ್ಪ ವಡ್ಡರ, ಚಂದ್ರು ಮಾಗಡಿ ಮಾತನಾಡಿ, ಸರ್ಕಾರದ ಆದೇಶವನ್ನೂ ಪಾಲಿಸದ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡದ ಅಧಿಕಾರಿ ನಮಗೆ ಬೇಡ ಎಂದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ದುರಗೇಶ ಆರ್.ಕೆ. ಅವರು, ಆದ ತಪ್ಪಿಗೆ ತಹಸೀಲ್ದಾರರಿಗೆ ನೊಟೀಸ್ ನೀಡಲಾಗುವುದು ಎಂದು ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲೆತ್ನಿಸಿದರು. ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೂ ಅಮಾನತ್ತಿನ ಅಧಿಕಾರ ಇಲ್ಲದಿದ್ದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಿಂದ ಅಮಾನತ್ತಿನ ಆದೇಶ ಮಾಡಿಸುವಂತೆ ಆಗ್ರಹಿಸಿದರು. ಇಲ್ಲವಾದರೆ ಈ ಹೋರಾಟ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು. ಅನಿವಾರ್ಯವಾಗಿ ಅಪರ ಜಿಲ್ಲಾಧಿಕಾರಿಗಳು ವಾಪಸ್ ಹೋದರು. ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟಿ ಮಾಡಿ ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದರು.ಈ ವೇಳೆ ಶಿವನಗೌಡ ಅಡರಕಟ್ಟಿ, ಗುರಪ್ಪ ಮುಳಗುಂದ, ಶಿವಜೋಗೆಪ್ಪ ಚಂದರಗಿ, ನೀಲಪ್ಪ ಕರ್ಜೆಕಣ್ಣವರ, ಶಂಕರ ಬ್ಯಾಡಗಿ, ಮಾದೇವಪ್ಪ ಅಣ್ಣಿಗೇರಿ, ಮಲ್ಲಿಕಾರ್ಜುನ ನೀರಾಲೋಟಿ, ನಿಂಗಪ್ಪ ಪ್ಯಾಟಿ, ಮುದ್ದಣ್ಣ ಸಾಲಮನಿ, ಚನ್ನಪ್ಪ ಕರಿಯತ್ತಿನ, ರಾಜು ಲಿಂಬಿಕಾಯಿ, ಶಿವು ಕಟಗಿ, ಚಂದ್ರು ಮಾಗಡಿ ಸೇರಿ ಅನೇಕರಿದ್ದರು.