ಸಾರಾಂಶ
ಹರಪನಹಳ್ಳಿ: ವಿದ್ಯುತ್ ಕಂಪನಿ ರದ್ದುಪಡಿಸಿರುವ ಆಕ್ರಮ- ಸಕ್ರಮ ಯೋಜನೆಯನ್ನು ಮುಂದುವರಿಸುವ ಮತ್ತು ವಿದ್ಯುತ್ ಸರಬರಾಜಿನಲ್ಲಿ ಉಂಟಾಗುತ್ತಿರುವ ಸಮಸ್ಯೆ ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವನಹಳ್ಳಿ ಮಂಜುನಾಥ ಬಣ) ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದ ಬೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಗಿತಗೊಳಿಸಿರುವ ಅಕ್ರಮ ಸಕ್ರಮ ಯೋಜನೆಯನ್ನು ಮುಂದುವರಿಸಬೇಕು. ಎಲ್‌ಟಿ ಲೈನ್ ಮತ್ತು ಪವರ್ ಲೈನ್ 500 ಮೀಟರ್ ಒಳಗೆ ಇದ್ದರೆ, ವಿದ್ಯುತ್ ಪರಿವರ್ತಕ ಇದಕ್ಕಿಂತ ದೂರವಿದ್ದರೆ ಸೋಲಾರ್ ಅಳವಡಿಸುವ ನಿಯಮ ಬಿಡಬೇಕು. ಟಿಸಿ ಸುಟ್ಟಾಗ 24 ಗಂಟೆ ಒಳಗೆ ಪರ್ಯಾಯ ಟಿಸಿಯನ್ನು ರೈತರಿಗೆ ಉಚಿತವಾಗಿ ನೀಡಬೇಕು. ಬಾಕಿ ಇರುವ ಟಿಸಿಗಳನ್ನು ತಕ್ಷಣವೇ ನೀಡಬೇಕು.
ರಾತ್ರಿ ಸಮಯದಲ್ಲಿ ಬೋರ್‌ವೆಲ್‌ಗೆ ವಿದ್ಯುತ್ ನೀಡದೇ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕು. ರೈತರ ಮೇಲೆ ಬೆಸ್ಕಾಂ ಅಧಿಕಾರಿಗಳು ಮಾಡುತ್ತಿರುವ ಹಣ ಸುಲಿಗೆ, ದಬ್ಬಾಳಿಕೆ ಕೂಡಲೇ ನಿಲ್ಲಿಸಬೇಕು. ಸ್ವ- ಇಚ್ಛೆಯಿಂದ ಸೋಲಾರ ಸಿಸ್ಟಮ್ ಬಯಸಿ ಬಂದ ರೈತರಿಗೆ ಯೋಜನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಪರಶುರಾಮ, ಉಪಾಧ್ಯಕ್ಷ ಆಲೂರು ಶ್ರೀನಿವಾಸ, ಕಮ್ಮಾರ ಶಂಕರ, ಶಂಕರನಾಯ್ಕ್, ಕೆಂಚಪ್ಪ, ದಾದಾಪೀರ, ರಾಜಸಾಬ್, ಅಂಜಿನಪ್ಪ, ಚೌಡಪ್ಪ, ಧರ್ಮನಾಯ್ಕ್, ಭೋಜ್ಯಾನಾಯ್ಕ ಇದ್ದರು.