ಪಿಂಚಣಿ ವಂಚಿತ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Dec 06 2024, 08:57 AM IST

ಪಿಂಚಣಿ ವಂಚಿತ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಪಿಂಚಣಿ ಹಾಗೂ ಜ್ಯೋತಿ ಸಂಜೀವಿನಿಯಂತಹ ಹಲವಾರು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು.

ಯಲ್ಲಾಪುರ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಯಲ್ಲಾಪುರ ಶಾಖೆಯ ವತಿಯಿಂದ ಡಿ. ೫ರಂದು ಶಾಸಕ ಶಿವರಾಮ ಹೆಬ್ಬಾರರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಲಾಯಿತು.

ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಶಾಲೆಗಳ ಹಲವಾರು ಬೇಡಿಕೆಗಳ ಕುರಿತು ಒಂದು ದಿನದ ಬೃಹತ್ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆಯ ಪರವಾಗಿ ಬೆಂಬಲವನ್ನು ಕೋರಿ, ವಿಧಾನಸಭೆಯಲ್ಲಿ ಈ ಕುರಿತಾಗಿ ವಿಷಯವನ್ನು ಮಂಡಿಸಿ ಅನುದಾನಿತ ಶಾಲೆಗಳ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸಲಾಯಿತು.ಶಾಸಕರು ಪ್ರತಿಕ್ರಿಯಿಸಿ, ನಿಮ್ಮ ಸಮಸ್ಯೆಗೆ ನಾನು ಸ್ಪಂದಿಸುತ್ತೇನೆ. ಸರ್ಕಾರದ ಮಟ್ಟದಲ್ಲಿ ಈ ಕುರಿತಾಗಿ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು. ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಪಿಂಚಣಿ ಹಾಗೂ ಜ್ಯೋತಿ ಸಂಜೀವಿನಿಯಂತಹ ಹಲವಾರು ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷ ಎಂ. ರಾಜಶೇಖರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಸಿ.ಎಸ್., ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ, ಹಿರಿಯ ಶಿಕ್ಷಕರಾದ ದಾಸಿಂತ್ ಫರ್ನಾಂಡಿಸ್, ಅಂತೋನ ರೋಡ್ರೀಗ್ಸ್, ಖ್ಯೆರುನ್ ಶೇಖ, ಪ್ರೇಮಾ ಗಾಂವ್ಕರ್, ಸದಸ್ಯರಾದ ವಿನೋದ್ ಭಟ್ಟ, ಚಿದಾನಂದ ಹಳ್ಳಿ, ಜಗದೀಶ್ ಭಟ್ಟ, ದೇವರಾಜ್ ಪಟಗಾರ್, ವೆಂಕಟರಮಣ ಭಟ್ಟ ಉಪಸ್ಥಿತರಿದ್ದರು.

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ

ಯಲ್ಲಾಪುರ: ಬಾಂಗ್ಲಾದಲ್ಲಿ ಆಕ್ರಮಣಕ್ಕೊಳಗಾದ ಹಿಂದೂಗಳ ಬೆಂಬಲಕ್ಕೆ ನಿಲ್ಲಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕಾರ್ಯಪ್ರವೃತ್ತವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದು ಸಮಾಜ, ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಹೊರತಾಗಿ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಹಿಂದು ಸಮಾಜದಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಬಾಂಗ್ಲಾದ ಹಿಂದೂಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದರು.

ಮುಡಾ ಹಗರಣ, ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿದ ಪ್ರಕರಣ ಸೇರಿ ಅನೇಕ ಹಗರಣಗಳ ಮೂಲಕ ದುರಾಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ. ಸದ್ಯದಲ್ಲೇ ಹೋರಾಟ ಇನ್ನಷ್ಟು ಚುರುಕುಗೊಳ್ಳಲಿದೆ ಎಂದರು.

ಸಂಘಟನಾ ಪರ್ವದ ಅಡಿಯಲ್ಲಿ ದೇಶಾದ್ಯಂತ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಎರಡು ತಿಂಗಳ ಅವಧಿಯಲ್ಲಿ ೧೦ ಕೋಟಿಗಿಂತ ಹೆಚ್ಚು ಜನ ಸದಸ್ಯತ್ವ ಪಡೆದಿದ್ದಾರೆ. ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಹಿಂದುಳಿದ ವರ್ಗದವರ ಮೇಲೆ ಕೇಸ್ ಹಾಕುವ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಹಿಂದುಳಿದ ವರ್ಗದವರು ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ತಾಲೂಕು ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಕಾರ್ಯದರ್ಶಿ ರವಿ ಕೈಟ್ಕರ್, ಮುಂಡಗೋಡ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಆಹ್ವಾನಿತ ಸದಸ್ಯರಾದ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಮಾಧ್ಯಮ ಸಂಚಾಲಕ ಕೆ.ಟಿ. ಹೆಗಡೆ ಇತರರು ಉಪಸ್ಥಿತರಿದ್ದರು.