ಬಾಗಲಕೋಟೆ ಹಳೇ ನಗರದ ನಡುಗಡ್ಡೆ ಪ್ರದೇಶದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ನವನಗರದ ಯುನಿಟ್-1 ಮತ್ತು 2ರಲ್ಲಿ ಮೂಲ ಸೌಕರ್ಯಗಳ ಕೊರತೆ ಖಂಡಿಸಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ 27ರಂದು ಬೃಹತ್ ಪಾದಯಾತ್ರೆ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೋರಾಟ ಸಮಿತಿ ಮುಖಂಡ ಅಶೋಕ ಲಿಂಬಾವಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಹಳೇ ನಗರದ ನಡುಗಡ್ಡೆ ಪ್ರದೇಶದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ನವನಗರದ ಯುನಿಟ್-1 ಮತ್ತು 2ರಲ್ಲಿ ಮೂಲ ಸೌಕರ್ಯಗಳ ಕೊರತೆ ಖಂಡಿಸಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ 27ರಂದು ಬೃಹತ್ ಪಾದಯಾತ್ರೆ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೋರಾಟ ಸಮಿತಿ ಮುಖಂಡ ಅಶೋಕ ಲಿಂಬಾವಳಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಕಿಲ್ಲಾ ಭಾಗದಲ್ಲಿರುವ ಅಂಬಾಭವಾನಿ ದೇವಸ್ಥಾನದಿಂದ ಆರಂಭಗೊಂಡು ಬಿಟಿಡಿಎ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ. ನಗರದ ವಾರ್ಡ್ ನಂ.1,2,3,6, 7 ಮತ್ತು 9ರ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಹಾಗೂ ನಡುಗಡ್ಡೆಯಾಗುವ ಸುಮಾರು 1100ಕ್ಕೂ ಅಧಿಕ ಕಟ್ಟಡಗಳ ಮಾಲೀಕರು ಮತ್ತು ಬಾಡಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಡುಗಡ್ಡೆ ಪ್ರದೇಶದಲ್ಲಿರುವ ಕಟ್ಟಡಗಳ ಮಾಲೀಕರು ಹಾಗೂ ಬಾಡಿಗೆದಾರರಿಗೆ ಮೊದಲು ಪರ್ಯಾಯ ನಿವೇಶನಗಳನ್ನು ನೀಡಿ ಸ್ಥಳಾಂತರಿಸಬೇಕು. ಆ ನಂತರ ಸೂಕ್ತ ಪರಿಹಾರ ಧನ ವಿತರಿಸಬೇಕು. ಪುನರ್ವಸತಿ ಅಧಿಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ (ಬೆಂಗಳೂರು) ಸಲ್ಲಿಸಿರುವ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.ಯುನಿಟ್ 1 ಮತ್ತು 2 ರಲ್ಲಿ ವೈಜ್ಞಾನಿಕವಾಗಿ ಕಸ ಹಾಕಿ ಬೆಂಕಿ ಹಚ್ಚಲಾಗುತ್ತಿದ್ದು, ಸುತ್ತಮುತ್ತಲಿನ ಸಾರ್ವಜನಿಕರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ.ವೈದ್ಯಕೀಯ ಸೌಲಭ್ಯ, ಪೊಲೀಸ್ ಠಾಣೆ, ಕುಡಿಯುವ ನೀರು, ಸಾರಿಗೆ ಬಸ್ ಸೌಕರ್ಯ, ರಸ್ತೆ, ದೀಪ ಹಾಗೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜೊತೆಗೆ ಮುಳ್ಳು ಕಂಟಿಗಳು ಬೆಳೆದು ಕಳ್ಳತನ ಹಾಗೂ ಅಕ್ರಮ ಚಟುವಟಿಕೆ ಹೆಚ್ಚಾಗಿದ್ದು, ಮಹಿಳೆಯರು ಮತ್ತು ಒಂಟಿ ನಿವಾಸಿಗಳು ಭಯದ ವಾತಾವರಣದಲ್ಲಿ ವಾಸಿಸುವಂತಾಗಿದೆ. ತಕ್ಷಣವೇ ಪೊಲೀಸ್ ಗಸ್ತು ಹೆಚ್ಚಿಸಬೇಕೆಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಬಾಗಲಕೋಟೆಯ ಸಮಸ್ತ ಮುಳುಗಡೆ ಸಂತ್ರಸ್ತರು, ಬಾಡಿಗೆದಾರರು ಹಾಗೂ ಸಾರ್ವಜನಿಕರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಎ.ಎ.ದಂಡಿಯಾ, ಸದಾನಂದ ನಾರಾ, ಗುಂಡೂರಾವ ಶಿಂಧೆ, ಸಂಗಯ್ಯ ಸರಗಣಾಚಾರಿ, ರಾಜು ವಾಘ, ಸುರೇಶ ಮಜ್ಜಗಿ ಮತ್ತಿತರರು ಇದ್ದರು.
