ಸಾರಾಂಶ
- ಹುಣಸಗಿ ರೈಲು ಹೋರಾಟ ಸಮಿತಿ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಹುಣಸಗಿಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹುಣಸಗಿ ರೈಲು ಹೋರಾಟ ಸಮಿತಿ ವತಿಯಿಂದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ, ಹುಣಸಗಿ, ಸುರಪುರ, ಹತ್ತಿಗುಡೂರ ಮಾರ್ಗವಾಗಿ ಯಾದಗಿರಿಯವರೆಗೆ ಬ್ರಿಟಿಷ್ ರೈಲು ಮಾರ್ಗ ಹಾಕಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು.ಅದರ ಪ್ರಕಾರ ಮೊದಲ ಹಂತವಾಗಿ ಮುದ್ದೇಬಿಹಾಳ ಹಾಗೂ ತಾಳಿಕೋಟಿಯವರೆಗೆ ಮಾರ್ಗ ಹಾಕಲು ಆರಂಭಿಸಿ, ಕಾಮಗಾರಿಯನ್ನು ಕೂಡ ಮಾಡಿದ್ದಾರೆ. ಆದರೆ, ಈಗ ಈ ಕಾಮಗಾರಿ ಮಾಡಿದ ಕುರುಹುಗಳನ್ನು ನಾವು ಈಗಲೂ ಆಲಮಟ್ಟಿಯಿಂದ ಹುಲ್ಲೂರುವರೆಗೆ ಅಲ್ಲಲ್ಲಿ ಕಾಣಬಹುದಾಗಿದೆ. ಮುಂದೆ 1933ರ ನಂತರ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ತೀವ್ರಗೊಂಡಿದ್ದರಿಂದ ಕಾಮಗಾರಿ ಮುಂದುವರಿದಿಲ್ಲ. ಈಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಗತಿಸುತ್ತಿದ್ದರೂ ಈ ನಿಯೋಜಿತ ರೈಲು ಮಾರ್ಗವನ್ನು ಮುಂದುವರೆಸುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಚೆನ್ನಕುಮಾರ ದಿಂಡವಾರ ಮಾತನಾಡಿ, ಆಲಮಟ್ಟಿ, ಹುಣಸಗಿ, ಯಾದಗಿರಿ ರೈಲು ಅನುಷ್ಠಾನಕ್ಕೆ ಇದುವರೆಗೆ ಅನೇಕ ಹೋರಾಟಗಳು ನಡೆದಿವೆ. ಆದರೆ, ಈ ಹೋರಾಟಗಳಿಗೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದರು. ರೈಲು ದರ ಕಡಿಮೆ ಇರುವುದರಿಂದ ಈಗ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಿಂದ ಜನರಿಗೆ ಪ್ರಯಾಣ ದುಬಾರಿಯಾಗುತ್ತಿದೆ. ರೈಲು ಮಾರ್ಗ ನಿರ್ಮಾಣದಿಂದ ಈ ಭಾಗದ ಬಡಜನರಿಗೆ ಮತ್ತು ಬೇರೆ ಬೇರೆ ಕಡೆಗಳಿಗೆ ಉದ್ಯೋಗ ಅರಸಿ ಹೋಗುವ ಕೂಲಿ ಕಾರ್ಮಿಕರ ಪ್ರವಾಸಕ್ಕೆ ಬಹಳ ಅನುಕೂಲವಾಗುತ್ತದೆ. ಮುದ್ದೆ ಮಾಲುಗಳನ್ನು ಕಡಿಮೆ ಖರ್ಚಿನಲ್ಲಿ ಸಾಗಿಸಬಹುದು. ಈ ಭಾಗದಲ್ಲಿ ಹೊಸ ಹೊಸ ಕೈಗಾರಿಕೆಗಳು ಮತ್ತು ಇನ್ನಿತರ ಉದ್ಯೋಗಗಳು ಸೃಷ್ಟಿಯಾಗಿ ಈ ಭಾಗ ಶ್ರೀಮಂತವಾಗುತ್ತದೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರವಾಗಲಿದೆ.ಈ ಮಾರ್ಗದಲ್ಲಿ ಐತಿಹಾಸಿಕ ಕೂಡಲಸಂಗಮ, ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂಗಳೇಶ್ವರ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ತಂಗಡಗಿ, ಆಲಮಟ್ಟಿ ಡ್ಯಾಂ, ನಾರಾಯಣಪುರ ಡ್ಯಾಂ, ಗೋವಾ ಪ್ರೇಕ್ಷಣಿಯ ಸ್ಥಳಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬರುವ ಪ್ರೇಕ್ಷಣಿಯ ಸ್ಥಳಗಳಿಂದ ಪ್ರವಾಸೋದ್ಯಮ ಬೆಳೆಯುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ತಿಪ್ಪಣ್ಣ ನಾಯಕ, ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಸದಸ್ಯ ಶರಣು ದಂಡಿನ್, ಸಿದ್ರಾಮಪ್ಪ ಮುದಗಲ್, ಆರ್.ಎಂ. ರೇವಡಿ, ಚನ್ನಯ್ಯ ಸ್ವಾಮಿ ಹಿರೇಮಠ, ಮಹಾದೇವಿ ಬೇವಿನಾಳಮಠ, ಮಹಾಂತಪ್ಪ ಮಲಗಲದಿನ್ನಿ, ಗುಂಡು ಗೆದ್ದಲಮಾರಿ, ಬಸವರಾಜ ಸಾಹು ಸಜ್ಜನ್, ರವಿ ಮಲಗಲದಿನ್ನಿ, ಅರುಣ ಮಲಗಲದಿನ್ನಿ ಸೇರಿದಂತೆ ಇತರರಿದ್ದರು.-----
ಫೋಟೊ: 6ವೈಡಿಆರ್1ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹುಣಸಗಿ ರೈಲು ಹೋರಾಟ ಸಮಿತಿಯಿಂದ ಹುಣಸಗಿಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.