ಕೊನೆ ಭಾಗದ ಕಾಲುವೆಗಳ ದುರಸ್ತಿಗೊಳಿಸಿ ನೀರು ಹರಿಸಲು ಆಗ್ರಹ

| Published : Oct 07 2024, 01:34 AM IST

ಕೊನೆ ಭಾಗದ ಕಾಲುವೆಗಳ ದುರಸ್ತಿಗೊಳಿಸಿ ನೀರು ಹರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

Demand to repair and drain the canals of the last part

-ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ

-----

ಕನ್ನಡಪ್ರಭ ವಾರ್ತೆ ವಡಗೇರಾ

ತಾಲೂಕಿನ ಕೊನೆ ಭಾಗದ ಕಾಲುವೆಗಳಲ್ಲಿ ಹೂಳು ತುಂಬಿದ್ದು, ಇದರಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ರೈತರು ಪರದಾಡುವಂತಾಗಿದೆ. ತಕ್ಷಣ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಲುವೆ ದುರಸ್ತಿಗೊಳಿಸಿ ನೀರು ಸರಬರಾಜಿಗೆ ಅನುಕೂಲ ಕಲ್ಪಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿತು.

ತಾಲೂಕಿನ ಕೃಷ್ಣಾ ಮೇಲ್ದಂಡೆ ಎಡಭಾಗದ ಕಾಲುವೆಯ ಕೊನೆಯಂಚಿನ ಗ್ರಾಮಗಳಾದ ಕೊಂಕಲ್ ಗೊಂದೇನೂರ, ಬಸವನಗರ, ವಡಗೇರಾ, ಬೀರನಕಲ್, ಕುರುಕುಂದ, ತೇಕರಾಳ, ಹೊರಟೂರು, ಕೋನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಕೊನೆ ಭಾಗದ ಕಾಲುವೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕಾ ಮಾತನಾಡಿ, ವಡಗೇರಾ ತಾಲೂಕಿನ ಕೊನೆ ಭಾಗದ ಕಾಲುವೆಗಳಲ್ಲಿ ಸಂಪೂರ್ಣ ಗಿಡಗಂಟಿ ಜಾಲಿಗಳಿಂದ ಹೂಳು ತುಂಬಿದ್ದು, ಕಾಲುವೆಗಳು ಇದ್ದರೂ ಇಲ್ಲದಂತಾಗಿವೆ. ಕಾಲುವೆಗಳು ಸಂಪೂರ್ಣ ಒಡೆದು ಹಾಳಾಗಿವೆ. ಕಾಲುವೆಯ ರಸ್ತೆಗಳಂತೂ ಜಾಲಿ ಗಿಡಗಳಿಂದ ಮುಚ್ಚಿ ಹೋಗಿದೆ. ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕಾಲವೆ ದುರಸ್ತಿ ಹಾಗೂ ಇನ್ನಿತರ ಕಾಮಗಾರಿಗಳಿಗಾಗಿ ಕೋಟಿಗಟ್ಟಲೆ ಹಣ ಬಿಡುಗಡೆಯಾದರು ಕೂಡ ಕೊನೆ ಭಾಗದ ಕಾಲುವೆಗಳ ದುರಸ್ತಿ ಮಾಡದೆ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕಾಲುವೆಗಳ ಅಭಿವೃದ್ಧಿಗೆ ಹಣವಿಲ್ಲ ಎಂದು ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಈ ಭಾಗಕ್ಕೆ ಕಾಲಿವೆಗಳು ನೆಪ ಮಾತ್ರಕ್ಕೆ ಎಂಬಂತಾಗಿವೆ ಎಂದು ದೂರಿದರು.

ಕಾಲುವೆಗಳಿಗೆ ನೀರು ಬರುವುದು ಅಪರೂಪವಾಗಿದೆ. ಕೆಲವು ಬಾರಿ ಕಾಲುವೆಗಳನ್ನು ನಂಬಿ ರೈತರು ಬಿತ್ತನೆ ಮಾಡುತ್ತಾರೆ. ಆದರೆ, ನೀರು ಬರದ ಕಾರಣ ಕಾಲುವೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾಲುವೆ ನೀರಿಗಾಗಿ ಬಕಪಕ್ಷಿಯಂತೆ ಕಾಯುವಂತಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೊನೆ ಭಾಗದ ಕಾಲುವೆಗಳನ್ನು ದುರಸ್ತಿಗೊಳಿಸಿ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘಟನೆಯ ಗೌರವಾಧ್ಯಕ್ಷ ಶರಣು ಜಡಿ, ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ, ಶರಣಯ್ಯ ಸ್ವಾಮಿ, ಹಳ್ಳೆಪ್ಪ, ಕೃಷ್ಣಾ ಟೇಲರ್, ನಾಗರಾಜ್ ಸ್ವಾಮಿ, ಹಿರೇಮಠ, ಮಲ್ಲು ನಾಟೇಕಾರ, ವೆಂಕಟೇಶ್ ಇಟಗಿ, ಮರಲಿಂಗ ಗೋನಾಲ್, ನಿಂಗು ಕುರ್ಕಳ್ಳಿ, ದೇವಪ್ಪ ಹೊರಟೂರ್ , ಬೀರ್ ಲಿಂಗ ಕುರುಕುಂದಾ, ಸಾಬಣ್ಣ ತೇಕರಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಎಚ್ಚರಿಸಿದ್ದಾರೆ.

----

ಫೋಟೊ: 6ವೈಡಿಆರ್3

ವಡಗೇರಾ ತಾಲೂಕಿನ ಕೊನೆ ಭಾಗದ ಕಾಲುವೆಗಳ ಸ್ಥಳಗಳಿಗೆ ರಾಜ್ಯ ಸಂಘದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.