ಸಾರಾಂಶ
ತುಮಕೂರು ದಸರಾ ಉತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿರುವ ಕೂಷ್ಮಾಂಡ ರೂಪದ ಚಾಮುಂಡೇಶ್ವರಿ ದೇವಿ
ಕನ್ನಡಪ್ರಭ ವಾರ್ತೆ ತುಮಕೂರುದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ರಾಜರಾಜೇಶ್ವರಿ(ಕೂಷ್ಮಾಂಡ) ರೂಪದಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿತ್ಯದ ಪೂಜೆ ಸಲ್ಲಿಸಿದರು.
ಶರನ್ನವರಾತ್ರಿ ಪ್ರಯುಕ್ತ ಜರುಗಿದ ಕನಕದುರ್ಗಾ ಹೋಮದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ನಾಗಣ್ಣ ಮತ್ತಿತರರು ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.ನವದುರ್ಗೆಯ ಅವತಾರಗಳಲ್ಲಿ ನಾಲ್ಕನೇಯದು ರಾಜರಾಜೇಶ್ವರಿ(ಕೂಷ್ಮಾಂಡ) ಅವತಾರ. ಕೂಷ್ಮಾಂಡ ದೇವಿಯು ತನ್ನ ದೈವಿಕವಾದ ನಗುವಿನೊಂದಿಗೆ ಜಗತ್ತನ್ನು ಸೃಷ್ಟಿಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ. ವಿಶ್ವವೇ ಇಲ್ಲದಿರುವಾಗ ಸುತ್ತಲೂ ಗಾಢಾಂಧಕಾರ ಕವಿದಿತ್ತು. ದೇವಿಯು ಆ ಸಮಯದಲ್ಲಿ ನಕ್ಕಿದ್ದರಿಂದ ಎಲ್ಲೆಡೆ ಬೆಳಕು ಕಂಡು ಬಂದಿತು. ಈ ಬಗೆಯಲ್ಲಿ ದೇವಿಯು ಭೂಮಿಯನ್ನು ಸೃಷ್ಟಿಸಿದ್ದಾಳೆ ಎಂಬುದು ಅನಾದಿಕಾಲದ ನಂಬಿಕೆ. ಕೂಷ್ಮಾಂಡ ದೇವಿಯ ರೂಪ ಬಹಳ ವಿಭಿನ್ನವಾಗಿದ್ದು, ಅಷ್ಟ ಭುಜವುಳ್ಳವಳಾಗಿದ್ದಾಳೆ. ಅವಳ ಏಳೂ ಕೈಗಳು ಕಮಂಡಲ, ಬಿಲ್ಲು, ಬಾಣ, ಕಮಲದ ಹೂ, ಮಕರಂದದಿಂದ ತುಂಬಿದ ಮಡಿಕೆ, ಚಕ್ರ, ಗಧೆಗಳನ್ನು ಹಿಡಿದಿವೆ. ಎಂಟನೇ ಕೈ ಜಪಮಾಲೆಯನ್ನು ಹಿಡಿದುಕೊಂಡು ಸಿಂಹದ ಮೇಲೆ ಕುಳಿತಿದ್ದಾಳೆ. ಈ ದೇವಿಯನ್ನು ಪೂಜಿಸುವುದರಿಂದ ಸಕಲ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಮುಜರಾಯಿ ತಹಸೀಲ್ದಾರ್ ಸವಿತಾ, ದೇವರಾಯನದುರ್ಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್, ಮತ್ತಿತರರು ಉಪಸ್ಥಿತರಿದ್ದರು.------ಯುವ ಸಂಭ್ರಮ: ವಿವಿಧ ಕಾರ್ಯಕ್ರಮಗಳು
ತುಮಕೂರು(ಕ.ವಾ.)ಅ.೬: ತುಮಕೂರು ದಸರಾ ಉತ್ಸವದ ಅಂಗವಾಗಿ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಿರ್ಮಿಸಿರುವ ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ವೇದಿಕೆಯಲ್ಲಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದ್ದು, ಕಾರ್ಯಕ್ರಮದ ಪ್ರಯುಕ್ತ ಅಕ್ಟೋಬರ್ ೧೦ರವರೆಗೆ ಪ್ರತಿ ದಿನ ಸಂಜೆ ೫ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಅಕ್ಟೋಬರ್ 7ರ ಕಾರ್ಯಕ್ರಮ:
ಅಕ್ಟೋಬರ್ 7 ರ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸಂಜೆ ೫ ಗಂಟೆಗೆ ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕು. ಲಕ್ಷ್ಮೀ, ಕು.ಧನುಶ್ರೀ ಮತ್ತು ತಂಡ ಹಾಗೂ ತುರುವೇಕೆರೆ ತಾಲೂಕು ದೊಡ್ಡೇನಹಳ್ಳಿ ಸೆಂಟ್ ಮೆರೀಸ್ ಪ್ರೌಢಶಾಲೆಯ ಕು. ಗಾನವಿ, ಕು.ಸಿಂಚನ ಮತ್ತು ತಂಡದವರಿಂದ ಯಕ್ಷಗಾನ ನೃತ್ಯ, ಧ್ವಜ ಕುಣಿತ, ಪೂಜಾ ಕುಣಿತ ಹಾಗೂ ವೀರಗಾಸೆ. ಸಂಜೆ 6 ಗಂಟೆಗೆ ಕು.ಕಾವ್ಯ, ಶ್ರೀ ದ್ಯಾವರಪ್ಪ ಹಾಗೂ ನಾಗರಾಜು ಡಿ. ಮತ್ತು ತಂಡದವರಿಂದ ಜಾನಪದ ಗೀತೆ ಗಾಯನ. ಸಂಜೆ 6.30 ಗಂಟೆಗೆ ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಕಲಾಗಂಗಾ ಮತ್ತು ತಂಡದವರಿಂದ ಜಾನಪದ ಮತ್ತು ಶಾಸ್ತ್ರೀಯ ನೃತ್ಯ. ಸಂಜೆ 7.30 ಗಂಟೆಗೆ ಕುಣಿಗಲ್ ಟೌನ್ ಕಲಾದರ್ಪಣ ಅವರಿಂದ ನೃತ್ಯ ವೈಭವ(ಅಷ್ಟ ಲಕ್ಷ್ಮೀ ನೃತ್ಯ). ರಾತ್ರಿ 8 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ವತಿಯಿಂದ ಡೊಳ್ಳು ಕುಣಿತ, ವೀರಗಾಸೆ ಕಾರ್ಯಕ್ರಮಗಳು ನಡೆಯಲಿವೆ.ಅಕ್ಟೋಬರ್ 8ರ ಕಾರ್ಯಕ್ರಮ:
ಅಂದು ಸಂಜೆ 5 ಗಂಟೆಗೆ ಕುಣಿಗಲ್ ಕೆಆರ್‌ಎಸ್ ಅಗ್ರಹಾರದ ಬಿ.ಜಿ.ಎಸ್. ಪ್ರೌಢಶಾಲೆ ಹಾಗೂ ಕೆ.ಎಚ್.ಬಿ. ಕಾಲೋನಿ ಸ್ಟೆಲ್ಲಾಮೆರೀಸ್ ಶಾಲೆಯ ಮಕ್ಕಳಿಂದ ನವದುರ್ಗೆಯರ, ಕನ್ನಡ ನಾಡು- ನುಡಿ ವರ್ಣನೆಯ ನೃತ್ಯ ಹಾಗೂ ಕನ್ನಡ ನಾಡು- ನುಡಿಯ ಸಮೂಹ ನೃತ್ಯ. ಸಂಜೆ 6 ಗಂಟೆಗೆ ತುಮಕೂರು ಕಿತ್ತಗಾನಹಳ್ಳಿಯ ಶ್ರೀ ಚಂದ್ರಶೇಖರಾಚಾರ್ ಮತ್ತು ತಂಡದಿಂದ ವಚನ ಗಾಯನ, ದೇವರ ನಾಮ ಹಾಗೂ ದಾಸರ ಪದ. ಸಂಜೆ 6.30 ಗಂಟೆಗೆ ತುಮಕೂರು ಶಾರದಾಂಬ ಪದವಿಪೂರ್ವ ಕಾಲೇಜಿನ ಕು.ಖುಷಿ ಮತ್ತು ತಂಡದಿಂದ ಭರತನಾಟ್ಯ. ಸಂಜೆ 7.30 ಗಂಟೆಗೆ ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀ ವಿದ್ಯಾ ಮತ್ತು ತಂಡದಿಂದ ಸುಗ್ಗಿ ಸಂಭ್ರಮ ಹಾಗೂ ರಾತ್ರಿ 8 ಗಂಟೆಗೆ ತುಮಕೂರಿನ ಯಕ್ಷ ದೀವಿಗೆ, ಆರತಿ ಪಟ್ರಮೆ ಅವರಿಂದ ಯಕ್ಷಗಾನ- ತೆಂಕಣತಿಟ್ಟು(ಮಹಿಷ ಮರ್ಧಿನಿ) ಕಾರ್ಯಕ್ರಮಗಳು ಜರುಗಲಿವೆ.ಯುವ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 10 ರವರೆಗೆ ಅರಣ್ಯ ಇಲಾಖೆ ಸಹಕಾರದೊಂದಿಗೆ ‘ವನ್ಯ ಜಗತ್ತು’ ದಸರಾ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಹಾಗೂ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಸಹಕಾರದೊಂದಿಗೆ ‘ಚಿತ್ರಕಲಾ ದರ್ಶನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಯುವ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.