ಸಾರಾಂಶ
ಹೊಳೆನರಸೀಪುರ: ಶ್ರೀ ಮಹಾಗಣಪತಿ ಸೇವಾ ಸಮಿತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವದ ಉತ್ಸವ ಶನಿವಾರ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತು ನಡುವೆ ಪಟಾಕಿ ಪ್ರದರ್ಶನ ಹಾಗೂ ಡಿಜೆ ಸದ್ದು ಇಲ್ಲದೆ, ಯಾವುದೇ ಜೋಶ್ ಇಲ್ಲದೆ ತರಾತುರಿಯಲ್ಲಿ ನಡೆಯಿತು. ಬೆರಳೆಣಿಕೆಯಷ್ಟು ಕಲಾ ತಂಡಗಳು ಮಾತ್ರ ಪ್ರದರ್ಶನ ಮಾಡಿದವು.
ಶ್ರೀ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಶ್ರೀ ಸ್ವಾಮಿಯ ಗಣೇಶೋತ್ಸವವು ೨೯ ದಿನಗಳು ವೈಭವದಿಂದ ಜರುಗಿತ್ತು. ಜತೆಗೆ ೬೭ನೇ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವಕ್ಕೆ ಶನಿವಾರ ಮಧ್ಯಾಹ್ನ ಕಡೇ ಪೂಜೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಭಾಗವಹಿಸಿ, ಉತ್ಸವಕ್ಕೆ ಚಾಲನೆ ನೀಡಿದ್ದರು.ಬಳಿಕ ಮಹಾ ಮಂಗಳಾರತಿ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸರ್ವಲಂಕೃತಗೊಂಡ ವೈಭವದ ರಥದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಪೇಟೆ ಮುಖ್ಯರಸ್ತೆ, ಕೋಟೆ ರಾಜ ಬೀದಿಯಲ್ಲಿ ಹಾಗೂ ಡಾ.ಅಂಬೇಡ್ಕರ್ ನಗರ ಮತ್ತು ಪ್ರಮುಖ ರಸ್ತೆಗಳಲ್ಲಿ ಮಂಗಳವಾಧ್ಯ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಯಾವುದೇ ಜೋಶ್ ಇಲ್ಲದೇ ತರಾತುರಿಯಲ್ಲಿ ಮೆರವಣಿಗೆ ಜರುಗಿತು.ಹೊಳೆನರಸೀಪುರ ಪ್ಲವರ್ ಡೆಕೊರೇಟರ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶ್ರೀ ವಿನಾಯಕ ಮೂರ್ತಿಯ ಉತ್ಸವದ ವಾಹನವನ್ನು ಅಕರ್ಷಕ ಪುಷ್ಪಗಳಿಂದ ರಥದಂತೆ ಸಿಂಗರಿಸಿ, ಮೆಚ್ಚುಗೆಗೆ ಪಾತ್ರರಾದರು. ಭಕ್ತರು ದಾರಿಯುದ್ದಕ್ಕೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯನ್ನು ಪೂರೈಸುವಂತೆ ವರಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದರು. ಭಾನುವಾರ ಮಧ್ಯಾಹ್ನ ೨ ಗಂಟೆಯ ನಂತರ ಹೇಮಾವತಿ ನದಿಯಲ್ಲಿ ಗೌರಿಗಣೇಶಸ್ವಾಮಿಯ ಮೂರ್ತಿಗಳನ್ನು ತೆಪ್ಪೋತ್ಸವ ನಡೆಸಿ ವಿಸರ್ಜಿಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್: ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಮೆರವಣಿಗೆಯ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಐಪಿಎಸ್ ಅಧಿಕಾರಿ, ಡಿವೈಎಸ್ಪಿ ಅಧಿಕಾರಿಗಳು, ವೃತ್ತ ನಿರೀಕ್ಷಕರು, ಪಿಎಸ್ಸೈಗಳು ಹಾಗೂ ೩೦೦ಕ್ಕೂ ಹೆಚ್ಚು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪೂಜಾ ಮಹೋತ್ಸವದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಶಿವಕುಮಾರ್, ಅಧ್ಯಕ್ಷ ಕೆ.ಶ್ರೀಧರ್, ಕಾರ್ಯಧ್ಯಕ್ಷ ಪುಟ್ಟಸೋಮಪ್ಪ, ಸುಧಾ ನಳಿನಿ, ದೊಡ್ಡಮಲ್ಲೇಗೌಡ, ಎಚ್.ವಿ.ಸುರೇಶ್ ಕುಮಾರ್, ಎಚ್.ಎಸ್.ಸುದರ್ಶನ್, ಎಸ್.ಗೋಕುಲ್, ಗುರುರಾಜ್, ಅಶೋಕ್, ಶಂಕರ್, ಪಿಎಚ್‌ಇ ವೆಂಕಟೇಶ್, ಮಂಜುನಾಥ್, ನರಸಿಂಹಶೆಟ್ಟಿ, ವೈ.ವಿ.ಚಂದ್ರಶೇಖರ್, ಈಶ್ವರ್, ಶಿವಕುಮಾರ್, ಲೋಕೇಶ್, ಗೋವಿಂದ, ಮುರಳಿಧರ ಗುಪ್ತ, ಮಹಮದ್ ಕಾಲೀದ್, ಕಾದಲನ್ ಕೃಷ್ಣ, ಶಂಕರನಾರಾಯಣ ಐತಾಳ್, ಪುರಸಭಾ ಸದಸ್ಯರು ಭಾಗವಹಿಸಿದ್ದರು. ವೈಭವ ಕಳೆದುಕೊಂಡ ವಿಸರ್ಜನಾ ಮಹೋತ್ಸವ
ಕಳೆದ ಎರಡು ದಶಕಗಳಿಂದ ಶ್ರೀ ವಿನಾಯಕನ ವಿಸರ್ಜಾನ ಮಹೋತ್ಸವದ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ, ಅತ್ಯಂತ ವೈಭವದಿಂದ ಮುಂಜಾನೆ ಐದು ಗಂಟೆಯ ತನಕ ನಡೆಯುತ್ತಿತ್ತು. ಆದರೆ ೨೦೨೪ರ ಗಣೇಶೋತ್ಸವವು ಇಬ್ಬರು ರಾಜಕೀಯ ನಾಯಕರ ಸ್ವಪತ್ರಿಷ್ಠೆಯಿಂದಾಗಿ ಗಲ್ಲಿ ಗಣಪತಿ ವಿಸರ್ಜನೆಯ ವೈಭವವು ಈಗಿನ ಗಣೇಶೋತ್ಸವಲ್ಲಿ ಇರಲಿಲ್ಲ ಎನ್ನಲಾಗಿದೆ. ಹುಲಿ ಬಂತು ಹುಲಿ ಎಂದು ಹೆದರಿಕೆ ಮೂಡಿಸುತ್ತ ರಾಜಕಾರಣ ಮಾಡುವ ವ್ಯಕ್ತಿಗಳ ಮನಸ್ಥಿತಿಯಿಂದಾಗಿ ಗಣೇಶೋತ್ಸವ ವೈಭವ ಕಳೆದುಕೊಂಡಿದೆ ಎಂದು ಸಾರ್ವಜನಿಕರು ಬೇಸರದಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂದಿತು.