ಸಾರಾಂಶ
ನ್ಯಾ.ಸದಾಶಿವ ವರದಿ ಜಾರಿಗೆ ಕರ್ನಾಟಕದ ಸರಕಾರದ ವಿಳಂಬ ನೀತಿ ಖಂಡಿಸಿ ಅಹಿಂದ ಜಾತಿಗಳ ಜಾಗೃತಿ ವೇದಿಕೆ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿತು.
ಚಿತ್ರದುರ್ಗದಲ್ಲಿ ಅಹಿಂದ ಜಾತಿಗಳ ಜಾಗೃತಿ ವೇದಿಕೆ ವತಿಯಿಂದ ಧರಣಿ । ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನ್ಯಾ.ಸದಾಶಿವ ವರದಿ ಅನುಸಾರ ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವುದು ಹಾಗೂ ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಅಹಿಂದ ಜಾತಿಗಳ ಜಾಗೃತಿ ವೇದಿಕೆ ವತಿಯಿಂದ ಗುರುವಾರ ಚಿತ್ರದುರ್ಗದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಧರಣಿ ನಿರತರು ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ, ಘೋಷಣೆ ಕೂಗಿದರು. ಕಾಂತರಾಜ್ ವರದಿಯ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ರಾಜ್ಯದಲ್ಲಿ ಅಹಿಂದ ವರ್ಗದ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಸಂಗತಿ ಹಿಂದಿನ ಅನೇಕ ಹಿಂದುಳಿದ ಆಯೋಗಗಳು ಖಚಿತಪಡಿಸಿವೆ. ಎಲ್.ಜಿ.ಹಾವನೂರು ವರದಿ ಕೂಡಾ ಸತ್ಯದ ದಟ್ಟ ಬೆಳಕು ಚೆಲ್ಲಿತ್ತು. ಇದಾದ ನಂತರ ಬಂದ ವರದಿಗಳು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಜಾತಿಗಳ ಸಂಖ್ಯೆ ಏನಿಲ್ಲವೆಂದರೂ ರಾಜ್ಯದಲ್ಲಿ ಶೇ.80 ರಷ್ಟಿದೆ ಎಂಬುದ ಸ್ಪಷ್ಟಪಡಿಸಿವೆ. ಈ ಎಲ್ಲ ವರದಿಗಳ ಪ್ರಕಾರ ಅಹಿಂದ ಸಮುದಾ ಯಗಳಿಗೆ ದಕ್ಕಿರುವ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸವಲತ್ತುಗಳು ಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಅಹಿಂದ ಜಾತಿಗೂ ಹಾಗೂ ಲಭ್ಯವಾಗಿರುವ ಸವಲತ್ತುಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಧರಣಿ ನಿರತರು ಆರೋಪಿಸಿದರು. ಅಹಿಂದ ಜನರಲ್ಲಿರುವ ಆಸ್ತಿ, ಆದಾಯ, ಸಂಪತ್ತು, ಅಧಿಕಾರ ಶೇ. 20 ರಿಂದ 30 ರಷ್ಟು ಮಾತ್ರ ಇದೆ ಎಂಬುದು ವಸ್ತು ಸ್ಥಿತಿಯಲ್ಲಿ ಮೇಲ್ನೋಟಕ್ಕೆ ಕಂಡು ಬರುವ ಸತ್ಯಾಂಶ. ಇದು ಸಂವಿಧಾನದ ಆಶಯ ಮತ್ತು ಸಂವಿಧಾನದ ನಿರ್ದೇಶಕ ತತ್ವಗಳಿಗೆ ತೀವ್ರ ವಿರೋಧಗಳಾಗಿವೆ. ಈ ಅಂಶಗಳ ಗಮನಿಸಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಂತರಾಜ್ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿ ಅಧ್ಯಯನಕ್ಕೆ ಆಯೋಗ ರಚಿಸಿತ್ತು. ಇದಕ್ಕಾಗಿ 163 ಕೋಟಿ ರುಪಾಯಿ ವ್ಯಯಿಸಿತ್ತು.
ಆಯೋಗದ ಜವಾಬ್ದಾರಿ ಹೊತ್ತ ಕಾಂತರಾಜ್ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಎಲ್ಲ ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮಾಹಿತಿ ಸಂಗ್ರಹಿಸಿದ್ದರು. ಇದೊಂದು ಚಾರಿತ್ರಿಕ ಮಹತ್ವದ ಘಟನೆಯಾಗಿತ್ತು. ನೂರಾರು ಕೋಟಿ ರುಪಾಯಿ ಸರ್ಕಾರಿ ಖಜಾನೆಯಿಂದ ಹಣ ಖರ್ಚು ಮಾಡಿ ವರದಿ ತಯಾರಾಗಿದ್ದರೂ ಇದುವರೆಗೂ ಅದನ್ನು ಬಹಿರಂಗಪಡಿಸುವ ಉಸಾಬರಿಗೆ ಸರ್ಕಾರ ಹೋಗಿಲ್ಲವೆಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದರು.ಕಾಂತರಾಜ್ ಅಯೋಗದ ವರದಿಯಲ್ಲಿ ರಾಜ್ಯದಲ್ಲಿರುವ ಜಾತಿಗಳ ಜನಸಂಖ್ಯೆ ಸ್ಪಷ್ಟವಾಗಿ ನಮೂದಿಸಲ್ಲಿಟ್ಟಿದೆ. ಇದಲ್ಲದೇ ಆಯಾ ಜಾತಿಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನವೂ ಅಡಕವಾಗಿದೆ.ಹಾಗಾಗಿ ಕರ್ನಾಟಕದ ಮಟ್ಟಿಗೆ ಇದೊಂದು ಅಪೂರ್ವ ವರದಿಯಾಗಿದ್ದು, ಹಿಂದುಳಿದ ಮತ್ತು ಶೋಷಿತರ ಪರವಾಗಿ ಧ್ವನಿ ಎತ್ತುತ್ತಾ ಬಂದಿರುವ ಸಿಎಂ ಸಿದ್ದರಾಮಮಯ್ಯ, ಮೊದಲು ಕಾಂತರಾಜ್ ವರದಿ ಬಹಿರಂಗಗೊಳಿಸುವುದರ ಮೂಲಕ ಬದ್ಧತೆ ಪ್ರದರ್ಶಿಸಬೇಕು. ಹಾಗೆಯೇ ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಹಿಂದ ಜಾತಿಗಳ ಜಾಗೃತಿ ವೇದಿಕೆಯ ಪ್ರಧಾನ ಸಂಚಾಲಕ ಸಿ.ಕೆ.ಮಹೇಶ್, ಜಿಲ್ಲಾಸಂಚಾಲಕರಾದ ಎಚ್.ಮಂಜಪ್ಪ, ಡಿ.ದುರುಗೇಶ್, ಬಿ.ಟಿ.ಜಗದೀಶ್, ಎಂ.ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಸಿ.ನಿರಂಜನಮೂರ್ತಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಕಾಂಗ್ರೆಸ್ ಮುಖಂಡ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ಲೇಖಕ ಅನಂದಕುಮಾರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಂ, ನಗರಸಭೆ ಸದಸ್ಯ ಭಾಸ್ಕರ್, ತಾಪಂ ಮಾಜಿ ಅಧ್ಯಕ್ಷ ಆನಂದ್, ಕಾಂಗ್ರೆಸ್ ಮುಖಂಡ ಅಶೋಕ್ ನಾಯ್ದು, ಶಿವಗಂಗ ಚಿತ್ತಯ್ಯ, ಬುರುಜಿನಹಟ್ಟಿ ಮಾಳೇಶ್, ದಸಂಸ ಮುಖಂಡರಾದ ಕುಮಾರ್ ಧರಣಿಯಲ್ಲಿ ಪಾಲ್ಗೊಂಡಿದ್ದರು.