ಭಾರತ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ, ಕಾನೂನುಬದ್ಧವಾಗಿ ಗಡಿಪಾರು ಮಾಡುವಂತೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದರು.

ಸಿದ್ದಾಪುರ: ಭಾರತ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಿ, ಕಾನೂನುಬದ್ಧವಾಗಿ ಗಡಿಪಾರು ಮಾಡುವಂತೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದರು.

ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಕುಟ್ಟದಿಂದ ಸೆ.28ರಂದು ಆರಂಭಗೊಂಡಿರುವ ಜನಜಾಗೃತಿ ವಾಹನ ಪ್ರಚಾರ ಜಾಥಾ ನೆಲ್ಲಿಹುದಿಕೇರಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಕ್ರಮ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.

ಫ್ಲೈದುಬೈ ವಿಮಾನಕ್ಕೆ ಸಂಬಂಧಿಸಿದ ಘಟನೆಯನ್ನು ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್, ವಿಮಾನವನ್ನು ಪತನಗೊಳಿಸುವ ಪ್ರಯತ್ನವನ್ನು ಭಾರತೀಯ ಪೈಲಟ್ ವಿಫಲಗೊಳಿಸಿ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಈ ಘಟನೆಯ ಹಿಂದೆ ಭಯೋತ್ಪಾದಕ ಕೈವಾಡವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಸಂಶಯ ವ್ಯಕ್ತಪಡಿಸಿದರು.ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಜಿಲ್ಲಾ ಸದಸ್ಯ ವಿ.ಕೆ.ಲೋಕೇಶ್ ಕುಮಾರ್ ಮಾತನಾಡಿ, ಉತ್ತರ ಭಾರತದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಸಂದರ್ಭ ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ ಎಂದು ಹೇಳಿದರು.

ಅಲ್ಲಿನ ಬೆಳವಣಿಗೆಗಳ ಬಳಿಕ ಅಕ್ರಮ ಬಾಂಗ್ಲಾದೇಶಿ ವಲಸಿಗರು ಕೊಡಗು ಜಿಲ್ಲೆಗೂ ಕೂಲಿ ಕಾರ್ಮಿಕರ ಸೋಗಿನಲ್ಲಿ ವಲಸೆ ಬಂದಿರುವ ಸಾಧ್ಯತೆ ಇದೆ ಎಂಬ ಸಂಶಯವಿದೆ. ಜಿಲ್ಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಮಿತಿಯ ಜಿಲ್ಲಾ ಪ್ರಮುಖ್ ಚಂದ್ರ ಉಡೋತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸುರೇಶ್, ಪದ್ಮನಾಭ, ಶ್ರೀನಿವಾಸ್, ಸುಕುಮಾರ್ ಮತ್ತಿತರರಿದ್ದರು.