ದೇಶದ ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ (ಎಸ್‌ಐಆರ್‌) ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಏಕಾಏಕಿ ಅವೈಜ್ಞಾನಿಕ ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಕೆಲಸ ಮಾಡುತ್ತಿರುವ ಜ್ಞಾನೇಶ ಕುಮಾರ ವಿರುದ್ಧ ಕ್ರಮವಾಗಬೇಕು.

ಹೊಸಪೇಟೆ: ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಿ, ತಕ್ಷಣವೇ ಬಂಧಿಸಬೇಕು ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ (ಎಸ್‌ಐಆರ್‌) ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಏಕಾಏಕಿ ಅವೈಜ್ಞಾನಿಕ ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಕೆಲಸ ಮಾಡುತ್ತಿರುವ ಜ್ಞಾನೇಶ ಕುಮಾರ ವಿರುದ್ಧ ಕ್ರಮವಾಗಬೇಕು ಎಂದರು.ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಸೂಚನೆ ಮೇರೆಗೆ ಮತದಾರರ ಪಟ್ಟಿಯಿಂದ ಮುಸ್ಲಿಂ ಮತದಾರರ ಹೆಸರು ತೆಗೆಸುವ ಸಂಚು ನಡೆದಿದೆ. ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪ-ದೋಷಗಳಿಗೆ ಆಯೋಗವೇ ಹೊಣೆಯಾಗಿದೆ. ಅದನ್ನು ಸರಿಪಡಿಸಬೇಕಾಗಿರುವುದು ಅಯೋಗದ ಕರ್ತವ್ಯ. ಅದು ಅರ್ಹ ಮತದಾರರನ್ನು ಕೈಬಿಡುವುದು ಸರಿಯಾದ ಕ್ರಮವಲ್ಲ ಎಂದರು.

ನೋಟೀಸ್ ನೀಡಿದವರು ಸಮರ್ಪಕವಾದ ದಾಖಲೆ ನೀಡಿದರೂ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕೆಲಸ ಆಗುತ್ತಿಲ್ಲ. ಯಾರು ಸೇರಬೇಕು ಎಂಬುದನ್ನು ಸ್ಥಳೀಯ ಬಿಎಲ್ಒಗಳ ಬದಲು ಚುನಾವಣಾ ಆಯೋಗದ ಕೇಂದ್ರ ಕಚೇರಿ ತೀರ್ಮಾನಿಸಲಿದೆ ಎಂದರು.

ವಿಜಯನಗರ 1.07 ಲಕ್ಷ ಮತದಾರರು ಹೊರಕ್ಕೆ: ವಿಜಯನಗರ ಜಿಲ್ಲೆಯಲ್ಲಿನ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 11.43 ಲಕ್ಷ ಮತದಾರರಿದ್ದು, ಅದರಲ್ಲಿ 1.07 ಲಕ್ಷ ಮತದಾರರನ್ನು ಕೈಬಿಡುವ ಪ್ರಯತ್ನ ನಡೆಸಲಾಗಿದೆ. ವಿಜಯನಗರ ಕ್ಷೇತ್ರದಲ್ಲಿ 35 ಸಾವಿರ, ಹಗರಿಬೊಮ್ಮನಹಳ್ಳಿ 20 ಸಾವಿರ, ಹಡಗಲಿ 13 ಸಾವಿರ, ಕೂಡ್ಲಿಗಿ 19 ಸಾವಿರ, ಹರಪನಹಳ್ಳಿಯಲ್ಲಿ 18 ಸಾವಿರ ಮತದಾರರ ಹೊರಗುಳಿಯಲಿದ್ದಾರೆ. ಸತ್ತವರ ಹೆಸರಲ್ಲಿ ಬದಕಿದವರ ಹೆಸರನ್ನು ತೆಗೆದು ಹಾಕುವಂತಹ ಕೆಲಸ ಎಸ್ಐಆರ್‌ ಮಾಡುತ್ತಿರುವುದರ ಹಿಂದೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಇದ್ದಾರೆ. ತಕ್ಷಣವೇ ಅವರನ್ನು ತೆಗೆದು ಹಾಕಿ, ಬಂಧಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದರು.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಕಾಂಗ್ರೆಸ್‌ ಮುಖಂಡರಾದ ರಶ್ಮಿ ರಾಜಶೇಖರ್ ಹಿಟ್ನಾಳ್‌, ಗುಜ್ಜಲ್‌ ನಾಗರಾಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.