ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

| Published : Sep 21 2024, 01:57 AM IST

ಸಾರಾಂಶ

ಆರ್‌ಬಿಐ ನಿರ್ದೇಶನದ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಹಲವು ಅನ್ಯಾಯಗಳು ನಡೆಯುತ್ತಿದ್ದು, ಇವುಗಳ ಸುಧಾರಣೆಯನ್ನು ನಿರೀಕ್ಷಿಸುತ್ತಿರುವಾಗಲೇ ಖಾಸಗೀ ಮೈಕ್ರೋ ಫೈನಾನ್ಸ್ ಸಾಲ ಸಂಸ್ಥೆಗಳ ಹಣ ಲೂಟಿ ಹಪಾಹಪಿತನಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಸಾಲ ಸಂಸ್ಥೆಗಳ ಹಾವಳಿ ತಡೆದು, ಮಹಿಳೆಯರ ಪ್ರಾಣ ರಕ್ಷಿಸುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತವನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲ ಸಂಸ್ಥೆಗಳ ಹಾವಳಿ ಮಿತಿ ಮೀರುತ್ತಿದೆ. ಮಹಿಳಾ ಸಂಘಗಳೆಂದು ಕ್ರೋಢೀಕರಿಸಿ ಸಾಲ ವಿತರಣೆ ಮಾಡುವುದು ಮತ್ತು ವಾಸದ ಮನೆಗಳನ್ನು ಅಡಮಾನ ಮಾಡಿಕೊಂಡು ಸಾಲ ನೀಡುವುದು. ಸಾಲ ವಸೂಲಿಗೆ ಈ ಸಂಸ್ಥೆಗಳಲ್ಲಿನ ಗೂಂಡಾಗಳು ತೋರುತ್ತಿರುವ ಕ್ರೂರ ಮತ್ತು ಅಮಾನುಷ ವರ್ತನೆಯಿಂದಾಗಿ ಮಾನ-ಮರ್ಯಾದೆಗೆ ಅಂಜಿದ ಸಾಲಗಾರ ಮಹಿಳೆಯರು ನೇಣಿಗೆ ಶರಣಾಗುತ್ತಿರುವ ದುರ್ಘಟನೆಗಳನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಆರ್‌ಬಿಐ ನಿರ್ದೇಶನದ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಹಲವು ಅನ್ಯಾಯಗಳು ನಡೆಯುತ್ತಿದ್ದು, ಇವುಗಳ ಸುಧಾರಣೆಯನ್ನು ನಿರೀಕ್ಷಿಸುತ್ತಿರುವಾಗಲೇ ಖಾಸಗೀ ಮೈಕ್ರೋ ಫೈನಾನ್ಸ್ ಸಾಲ ಸಂಸ್ಥೆಗಳ ಹಣ ಲೂಟಿ ಹಪಾಹಪಿತನಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಈ ಅನ್ಯಾಯಕ್ಕೆ ಲಗಾಮು ಹಾಕಲು ಗಂಭೀರ ಕ್ರಮ ವಹಿಸುವುದು ಮತ್ತು ಸಾಲಗಾರ ಸಂತ್ರಸ್ಥರು ಬದುಕುವ ಹಕ್ಕು ಮತ್ತು ನ್ಯಾಯವಾದ ಆರ್ಥಿಕ ನೀತಿಯನ್ನು ಸರ್ಕಾರ ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

ಕೇವಲ ೭೦೦ ರು. ಸಾಲ ಪಾವತಿಸಿಲ್ಲ ಎಂಬ ಕಾರಣಕ್ಕೆ ಮಳವಳ್ಳಿ ತಾಲೂಕು ಮಲಿಯೂರು ಗ್ರಾಮದ ದಲಿತ ಮಹಿಳೆಯನ್ನು ಮೈಕ್ರೋ ಫೈನಾನ್ಸ್ ಕಂಪನಿಯವರು ಅವಮಾನಿಸಿದ್ದಾರೆ. ಇದರಿಂದ ಬೇಸತ್ತು ಆಕೆ ನೇಣಿಗೆ ಶರಣಾಗಿದ್ದಾಳೆ. ಹೊಳಲು ಗ್ರಾಮದಲ್ಲಿ ಮಹಿಳೆಯರು ನೇಣುಗೆ ಶರಣಾಗುವ ಪ್ರತಿಭಟನೆ ಮಾಡಿದ್ದಾರೆ. ಮಂಡ್ಯ ತಹಸೀಲ್ದಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ಇಂತಹ ಫೈನಾನ್ಸ ಸಾಲ ಸಂಸ್ಥೆಗಳ ಉಪಟಳವನ್ನು ಖಂಡಿಸಿದರು.

ಮುಖಂಡರಾದ ಸುರೇಶ್‌ಕುಮಾರ್, ಅನಿಲ್‌ಕುಮಾರ್, ಆನಂದ್ ಗೋಷ್ಠಿಯಲ್ಲಿದ್ದರು.