ಅರಕೇರಾ(ಕೆ) ಪಿಡಿಒ ವರ್ಗಾವಣೆಗೆ ಆಗ್ರಹ

| Published : Aug 02 2024, 12:48 AM IST

ಸಾರಾಂಶ

ಸುರಪುರ ತಾಲೂಕಿನ ಅರಕೇರಾ ಕೆ. ಗ್ರಾಪಂ ಪಿಡಿಒ ಅವರನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದು, ಕೂಡಲೇ ಆದೇಶ ನೀಡಬೇಕು ಎಂದು ಆಗ್ರಹಿಸಿ ಅರಕೇರಾ ಕೆ. ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಅರಕೇರಾ(ಕೆ) ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಮೂಲಸ್ಥಾನಕ್ಕೆ ವರ್ಗಾವಣೆ ಮಾಡಿದ್ದು, ಕೂಡಲೇ ಆದೇಶ ನೀಡಬೇಕು ಎಂದು ಅರಕೇರಾ(ಕೆ) ಗ್ರಾಪಂ ಸದಸ್ಯರು ಬುಧವಾರ ನಗರದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರಿಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯರು, ನಾಲ್ಕೈದು ವರ್ಷದಿಂದ ಅರಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ವರ್ಗಾವಣೆ ಆದೇಶವಾಗಿ ಐದು ಕಳೆದರು ಯಾಕೆ ಆದೇಶ ನೀಡುತ್ತಿಲ್ಲ. ಆದ್ದರಿಂದ ಈ ಕೂಡಲೇ ಆದೇಶ ನೀಡಬೇಕು. ಇಲ್ಲವಾದರೆ 13 ಸದಸ್ಯರ ರಾಜೀನಾಮೆ ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮಸ್ಥರಿಂದ ನಿತ್ಯ ನಿಂದನೆ ಅನುಭವಿಸುತ್ತಿದ್ದೇವೆ. ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಜನಸಾಮಾನ್ಯರಿಗೆ ಮುಖ ತೋರಿಸಲು ಆಗುತ್ತಿಲ್ಲ. ಜನರಿಗೆ ನೀವು ಉತ್ತರ ಕೊಡುವವರಲ್ಲ. ನಾವು ಉತ್ತರ ಕೊಡಬೇಕಿದೆ. ಪಿಡಿಒ ಅವರನ್ನು ವರ್ಗಾವಣೆ ಮಾಡದಿದ್ದರೆ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸದಸ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಎರಡು ದಿನ ರಜೆ ಇರುವ ಕಾರಣ ವರ್ಗಾವಣೆ ಆದೇಶ ನೀಡಲಾಗಿಲ್ಲ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಎರಡು ದಿನ ಕಾಯುವಂತೆ ತಿಳಿಸಿದ್ದಾರೆ. ಕಾನೂನು ರೀತಿ ವರ್ಗಾವಣೆಗೆ ಆದೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯರಾದ ದೀಪಮ್ಮ, ನರಸಮ್ಮ, ಭೀಮರಾಯ, ರೇಣುಕಾ, ಲಕ್ಷ್ಮಿ, ವೆಂಕಟೇಶ, ಬಾಬನಬೀ, ಶರಣರಮ್ಮ, ಲಕ್ಷ್ಮಿ, ಭೀಮವ್ವ, ಮರೆಪ್ಪ, ಶರಣು ಸೇರಿದಂತೆ ಇತರರಿದ್ದರು.