ಸಾರಾಂಶ
ಭಟ್ಕಳ: ಇಲ್ಲಿನ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸ್ಥಳೀಯ ಘಟಕದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.ಕಂದಾಯ ಇಲಾಖೆಯಲ್ಲಿ ಕಳೆದ ಹತ್ತಕ್ಕೂ ಅಧಿಕ ವರ್ಷಗಳಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಬೇಗೆ ಕಡೆಗೆ ಇವರನ್ನು ವರ್ಗಾಯಿಸುವಂತೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸ್ಥಳೀಯ ಘಟಕದ ಕಾರ್ಯಕರ್ತರು ಆಗ್ರಹಿಸುತ್ತಲೇ ಬಂದಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಶುಕ್ರವಾರ ಸಂಜೆ ಧರಣಿನಿರತ ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ ನಾಯ್ಕಡ ಅವರು ಭೇಟಿ ನೀಡಿದಾಗ ಅವರನ್ನು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತರು, ನಾವು ಕಳೆದ 23ನೇ ತಾರೀಕಿನಿಂದ ಜಿಲ್ಲಾಡಳಿತಕ್ಕೆ ಮನವಿ ನೀಡಿ ವರ್ಗಾವಣೆ ನಿಯಮದಂತೆ ಕಂದಾಯ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾಯಿಸಿ ಪಾರದರ್ಶಕ ಆಡಳಿತಕ್ಕೆ ಅನುವು ಮಾಡಿಕೋಡಬೇಕು ಎಂದು ಆಗ್ರಹಿಸಿದ್ದೇವೆ. ಒಂದೊಮ್ಮೆ ಮನವಿಗೆ ಸ್ಪಂದಿಸದಿದ್ದರೆ ಧರಣಿ ಕುಳಿತುಕೊಳ್ಳುವುದಾಗಿ ತಿಳಿಸಿದ್ದೆವು. ಮನವಿ ನೀಡಿ ಒಂದು ತಿಂಗಳು ಕಳೆದರೂ ಜಿಲ್ಲಾಡಳಿತ ಮನವಿಗೆ ಸ್ಪಂದಿಸಲ್ಲ. ಆ ಕಾರಣದಿಂದಾಗಿ ಅನಿವಾರ್ಯವಾಗಿ ಧರಣಿ ಮಾಡುತ್ತಿದ್ದೇವೆ ಎಂದರು.ಸೋಮವಾರದ ತನಕ ಜಿಲ್ಲಾಡಳಿತ ಒಂದು ನಿರ್ಧಾರಕ್ಕೆ ಬರದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧರಿದ್ದೇವೆ ಎಂದರು. ಪ್ರತಿಭಟನಾಕಾರನ್ನು ಸಮಾಧಾನಿಸಿ ಮಾತನಾಡಿದ ತಹಸೀಲ್ದಾರ್ ನಾಗರಾಜ ನಾಯ್ಕಡ ಅವರು, ಸಹಾಯಕ ಆಯುಕ್ತರ ಆದೇಶದ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದೇನೆ. ಈಗಾಗಲೇ ಜಿಲ್ಲಾಡಳಿತ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವಿವರಣೆ ಪಡೆದುಕೊಂಡಿದೆ. ಶೀಘ್ರವೇ ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂದರು.
ಇದಕ್ಕೆ ಒಪ್ಪದ ಆರ್‌ಟಿಐ ಕಾರ್ಯಕರ್ತರು, ತಾಲೂಕಾಡಳಿತ ಇಲ್ಲವೇ ಜಿಲ್ಲಾಡಳಿತ ಯಾವುದೇ ರೀತಿಯ ನಿರ್ಣಯ ಕೈಗೊಂಡರೂ ಅದನ್ನು ಲಿಖಿತ ರೂಪದಲ್ಲಿ ನೀಡಬೇಕು. ನಿಮ್ಮಿಂದ ಸ್ಪಷ್ಟ ಆದೇಶ ನಮ್ಮ ಕೈಸೇರುವ ತನಕ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.ಆರ್‌ಟಿಐ ಕಾರ್ಯಕರ್ತರಾದ ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ, ಶಂಕರ ನಾಯ್ಕ, ರಾಜು ನಾಯ್ಕ, ವಸಂತ ದೇವಾಡಿಗ, ದೀಪಕ ನಾಯ್ಕ, ಮಾದೇವ ನಾಯ್ಕ, ನಾಗೇಶ ನಾಯ್ಕ ಮುಂತಾದವರಿದ್ದರು.