ಶಿಕ್ಷಕನ ವರ್ಗಾವಣೆಗೆ ಆಗ್ರಹ: ಶಾಲೆ ಎಲ್ಲಾ 24 ಮಕ್ಕಳು ಗೈರು

| Published : Jul 09 2024, 12:58 AM IST / Updated: Jul 09 2024, 01:29 PM IST

ಶಿಕ್ಷಕನ ವರ್ಗಾವಣೆಗೆ ಆಗ್ರಹ: ಶಾಲೆ ಎಲ್ಲಾ 24 ಮಕ್ಕಳು ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ತಾಲೂಕಿನ ವಗಳೆ ಸಮೀಪದ ತಮ್ಮಡವಳ್ಳಿ ಗ್ರಾಮದ ಚಂಡೆಗುಡ್ಡೆ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ವರ್ಗಾವಣೆಗೊಳಿಸದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹಠ ಹಿಡಿದ ಗ್ರಾಮಸ್ಥರು ಸೋಮವಾರ ಒಂದು ಮಗುವನ್ನು ಶಾಲೆಗೆ ಕಳುಹಿಸದೆ ವಿರೋಧ ವ್ಯಕ್ತಪಡಿಸಿದರು.

ಕೊಪ್ಪ : ತಾಲೂಕಿನ ವಗಳೆ ಸಮೀಪದ ತಮ್ಮಡವಳ್ಳಿ ಗ್ರಾಮದ ಚಂಡೆಗುಡ್ಡೆ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ವರ್ಗಾವಣೆಗೊಳಿಸದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹಠ ಹಿಡಿದ ಗ್ರಾಮಸ್ಥರು ಸೋಮವಾರ ಒಂದು ಮಗುವನ್ನು ಶಾಲೆಗೆ ಕಳುಹಿಸದೆ ವಿರೋಧ ವ್ಯಕ್ತಪಡಿಸಿದರು. 

ವರ್ಷದ ಹಿಂದೆ ನ.ರಾ.ಪುರ ತಾಲೂಕಿನ ಪ್ರಾಥಮಿಕ ಶಾಲೆಯೊಂದರಿಂದ ಪೋಕ್ಸೋ ಪ್ರಕರಣದಲ್ಲಿ ಅಮಾನತುಗೊಂಡ ಶಿಕ್ಷಕರನ್ನು ಈ ಶಾಲೆಗೆ ವರ್ಗಾವಣೆಗೊಳಿಸಲಾಗಿತ್ತು. ಆ ಸಮಯದಲ್ಲಿ ಗ್ರಾಮಸ್ಥರು ಈ ಶಿಕ್ಷಕರು ನಮ್ಮ ಶಾಲೆಗೆ ಬೇಡವೆಂದು ಹಠ ಹಿಡಿದಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ೨ ತಿಂಗಳ ಮಟ್ಟಿಗೆ ಮಾತ್ರ ಈ ಶಿಕ್ಷಕರನ್ನು ಇಲ್ಲಿಗೆ ಪನಿಶ್‌ಮೆಂಟ್ ವರ್ಗಾವಣೆಗೊಳಿಸಲಾಗಿದೆ. ನಂತರ ಇಲ್ಲಿಂದ ಬೇರೆಡೆಗೆ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿತ್ತು.

ಆದರೆ ವರ್ಷ ಕಳೆದರೂ ಈ ಶಿಕ್ಷಕರನ್ನು ವರ್ಗಾವಣೆಗೊಳಿಸದೆ ಇರುವುದರಿಂದ ನಾವು ನಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಹಠ ಹಿಡಿದ ಪರಿಣಾಮ ಸೋಮವಾರ ಶಾಲೆಯ ಎಲ್ಲಾ 24 ಮಕ್ಕಳು ಗೈರಾಗಿದ್ದರು. ಶಾಲಾ ಮಕ್ಕಳು ಗೈರಾಗಿರುವ ವಿಚಾರ ತಿಳಿದರೂ ಶಿಕ್ಷಣಾಧಿಕಾರಿಗಳಾಗಲಿ, ಇಲಾಖೆಯ ಯಾವೊಬ್ಬ ಅಧಿಕಾರಿಯಾಗಲಿ ಶಾಲೆಗೆ ಬಂದು ಪರಿಶೀಲನೆ ನಡೆಸದೆ ಇರುವುದು ದುರಂತ. ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸುವಂತೆ ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ ಸಮಿತಿ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರೂ ಸ್ಪಂದನಾ ಶೂನ್ಯವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಪೋಕ್ಸೋ ಪ್ರಕರಣದಿಂದ ಶಿಕ್ಷೆ ಅನುಭವಿಸಿ ಬಂದ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗೇಶ್ ತಿಳಿಸಿದ್ದಾರೆ. -- ಬಾಕ್ಸ್--

ಪ್ರತಿಭಟನೆ ಎಚ್ಚರಿಕೆ

ಶಾಲೆಯ ಗೈರು ಹಾಜರಾತಿ ಕುರಿತು ಖುದ್ದಾಗಿ ಶಿಕ್ಷಣಾಧಿಕಾರಿಗಳ ಗಮನ ಸೆಳೆದರೂ ಯಾವುದೇ ಸ್ಪಂದನೆ ನೀಡಲಿಲ್ಲ. ಇಲ್ಲಿ ಹೆಚ್ಚಾಗಿ ದಲಿತ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಇರುವುದರಿಂದ ಶಾಲೆಯನ್ನು ಕಡೆಗಣಿಸಲಾಗುತ್ತಿದೆ. ಕೂಡಲೇ ಕ್ರಮ ವಹಿಸಲಿದ್ದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಶಿಕ್ಷಣ ಇಲಾಖೆಯ ಗಮನ ಸೆಳೆದು ಪ್ರತಿಭಟನೆಗಿಳಿಯುತ್ತೇವೆ ಎಂದು ಡಿ.ಎಸ್.ಎಸ್. ರಾಜ್ಯ ಮುಖಂಡ ರಾಜಾಶಂಕರ್ ತಿಳಿಸಿದ್ದಾರೆ.