ಜೆಸಿಬಿಯಿಂದ ಮರಗಳ ಮಾರಣ ಹೋಮ ಕ್ರಮಕ್ಕೆ ಆಗ್ರಹ

| Published : Jun 06 2024, 12:30 AM IST

ಜೆಸಿಬಿಯಿಂದ ಮರಗಳ ಮಾರಣ ಹೋಮ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಪರಿಸರ ದಿನದಂದು ಮರಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ ಘಟನೆ ತಾಲೂಕಿನ ಪಳವಳ್ಳಿ ಹೊರವಲಯದ ಜಮೀನುಗಳಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ವಿಶ್ವ ಪರಿಸರ ದಿನದಂದು ಮರಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ ಘಟನೆ ತಾಲೂಕಿನ ಪಳವಳ್ಳಿ ಹೊರವಲಯದ ಜಮೀನುಗಳಲ್ಲಿ ನಡೆದಿದೆ.

ತಾಲೂಕಿನ ಪಳವಳ್ಳಿ ಗ್ರಾಮದ ಗೋಪಾಲಪ್ಪ, ಓಬಳೇಶಪ್ಪ ರಾಮಾಂಜಿ, ಶಾಂತಪ್ಪ ನಾಗೇಶ್ ಎಂಬುವರಿಗೆ ಸೇರಿದ ಸರ್ವೆ ನಂಬರ್ 432/3 ಹಾಗೂ ಇವರ ಜಮೀನಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಬೆಳೆದಿದ್ದ ನಲವತ್ತಕ್ಕೂ ಅಧಿಕ ಬೇವು, ಈಚಲು ಹಾಗೂ ಸೀಮೆ ಜಾಲಿ ಮರಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಗಂಗಸಾಗರ ಗ್ರಾಮದ ವೆಂಕಟಸ್ವಾಮಿ, ಪ್ರಸನ್ನ ಕುಮಾರ್ ಮತ್ತು ಪರ್ವತಯ್ಯ ಎಂಬುವರು ಜೆಸಿಬಿ ಮೂಲಕ ಏಕಾಏಕಿ ಮರ ನೆಲಕ್ಕುರಳಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಪರಿಸರ ಸಂರಕ್ಷಣೆ ಮಾಡಬೇಕಿದ್ದ ನಾವು, ವಿಶ್ವ ಪರಿಸರ ದಿನದಂದು ಮರಗಳನ್ನು ನಾಶಪಡಿಸಿದ್ದು, ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ರೈತ ನಾಗೇಶ್‌ ಮಾತನಾಡಿ, ಹಿರಿಯರ ಕಾಲದಲ್ಲಿ ಸರ್ಕಾರದಿಂದ ಜಮೀನು ಮಂಜೂರಾಗಿದ್ದು, ಈ ಬಗ್ಗೆ ಇನಾಂ ಜಮೀನು ಖಾತರಿಯ ದಾಖಲೆಗಳಿವೆ. ಗಂಗಸಾಗರದ ವೆಂಕಟಸ್ವಾಮಿ ಎಂಬುವರಿಗೆ ಕೆಲ ಜಮೀನು ಮಾರಿದ್ದು, ಅವರು ಖರೀದಿಸಿದ್ದ ಜಮೀನು ಹೊರತುಪಡಿಸಿ, ನಾವು ಉಳಿಮೆ ಮಾಡುವ ಜಮೀನುಗಳಿಗೆ ಜೆಸಿಬಿ ನುಗ್ಗಿಸಿ ಮರಗಳನ್ನು ಕಿತ್ತು ಹಾಕಿಸುತ್ತಿದ್ದಾರೆ. ತಾಲೂಕು ಕಚೇರಿ, ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದು ತಹಸಿಲ್ದಾರ್ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಯ ಬಳಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು. ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಿರುವುದಾಗಿ ಹೇಳಿದರು.