ರಾಜ್ಯದಲ್ಲಿ ಸುಮಾರು 75 ಲಕ್ಷ ಜನಸಂಖ್ಯೆ ಹೊಂದಿರುವ, ರಾಜ್ಯದ ಮೂರನೇ ಅತಿ ದೊಡ್ಡ ಸಮುದಯವಾದ ಕುರುಬ ಸಮಾಜಕ್ಕೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಎರಡು ಸಚಿವ ಸ್ಥಾನ ನೀಡುವಂತೆ ಕುರುಬರ ವಿದ್ಯಾವರ್ಧಕ ಸಂಘ ಜಿಲ್ಲಾ ಅಧ್ಯಕ್ಷ ವೈ.ವಿರೂಪಾಕ್ಷಪ್ಪ ಜಡಗನಹಳ್ಳಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಸುಮಾರು 75 ಲಕ್ಷ ಜನಸಂಖ್ಯೆ ಹೊಂದಿರುವ, ರಾಜ್ಯದ ಮೂರನೇ ಅತಿ ದೊಡ್ಡ ಸಮುದಯವಾದ ಕುರುಬ ಸಮಾಜಕ್ಕೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಎರಡು ಸಚಿವ ಸ್ಥಾನ ನೀಡುವಂತೆ ಕುರುಬರ ವಿದ್ಯಾವರ್ಧಕ ಸಂಘ ಜಿಲ್ಲಾ ಅಧ್ಯಕ್ಷ ವೈ.ವಿರೂಪಾಕ್ಷಪ್ಪ ಜಡಗನಹಳ್ಳಿ ಒತ್ತಾಯಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಂಪುಟ ವಿಸ್ತರಣೆ ಬಗ್ಗೆ ಮಾತು ಕೇಳಿಬರುತ್ತಿದ್ದು, ಮಧ್ಯ ಹಾಗೂ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಪೈಕಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಕುರುಬ ಸಮಾಜವು 150ಕ್ಕೂ ಹೆಚ್ಚು ಕ್ಷೇತ್ರಗಳ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನೇರವಾಗಿ ಫಲಿತಾಂಶವನ್ನೇ ನಿರ್ಧರಿಸುವ ಸ್ಥಾನದಲ್ಲಿ ಸಮುದಾಯವಿದೆ. ಈ ಎಲ್ಲ ಅಂಶ ಪರಿಗಣಿಸಿ, ಕುರುಬ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.ಮೈಸೂರು ಭಾಗದ ಕುರುಬ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಬಸವರಾಜ ಶಿವಣ್ಣನವರ್ ಸೇರಿದಂತೆ ಇನ್ನೊಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಸೇರಿದಂತೆ ಪಕ್ಷದ ನಾಯಕರು ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ, ಸಂಪುಟದಲ್ಲಿ ಅವಕಾಶವನ್ನು ಕಲ್ಪಿಸಿಕೊಡಲಿ ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ಮಾತನಾಡಿ, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ 15 ಶಾಸಕರಿದ್ದಾರೆ. ಕಾಂಗ್ರೆಸ್‌ನಲ್ಲೇ 11 ಶಾಸಕರಿದ್ದು, 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕುರುಬ ಸಮುದಾಯ ಮತ ನೀಡಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಬೇಕೆಂದರೆ, ಸಮಾಜಕ್ಕೆ ಇನ್ನೂ ಎರಡು ಸಚಿವ ಸ್ಥಾನಗಳನ್ನು ನೀಡಲಿ ಎಂದರು.ರಾಜ್ಯಮಟ್ಟದ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೂ ಕುರುಬ ಸಮಾಜಕ್ಕೆ ನೀಡಬೇಕು. ಸರ್ಕಾರದ ನಾಮ ನಿರ್ದೇಶನದಲ್ಲೂ ಕುರುಬ ಸಮಾಜಕ್ಕೆ ಅವಕಾಶ ನೀಡಲು ಪರಿಗಣಿಸಬೇಕು. ಮುಂಬರುವ ಬಿಬಿಎಂಪಿ ಚುನಾವಣೆ, ರಾಜ್ಯದ ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುರುಬ ಸಮಾಜ ಹೆಚ್ಚಿನದಾಗಿ ಸ್ಪಂದಿಸಬೇಕೆಂದರೆ ಸಮಾಜಕ್ಕೆ 2 ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸರ್ಕಾರದ ನಾಮ ನಿರ್ದೇಶನದಲ್ಲಿ ಸಮಾಜಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಕೆ.ಭಗತ್ ಸಿಂಹ, ನಿರ್ದೇಶಕರಾದ ಕೆ.ರೇವಣಸಿದ್ದಪ್ಪ ಗಂಗನರಸಿ, ಹದಡಿ ಜಿ.ವಿ.ಮಹಾಂತೇಶ, ಆರ್.ರಮೇಶ, ಆನಂದಪ್ಪ, ನಾಗಪ್ಪ, ಮಂಜುನಾಥ ಇತರರು ಇದ್ದರು.