ಸಾರಾಂಶ
-29 ರಂದು ಸಂಸದ ಗೋವಿಂದ ಕಾರಜೋಳ ಮನೆ ಮುಂಭಾಗ ಪ್ರತಿಭಟನೆ । ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನ
------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ನೆನೆ ಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಸಂಬಂಧ ಜನ ಪ್ರತಿನಿಧಿಗಳ ಎಚ್ಚರಿಸಲು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಎದ್ದೇಳು ಜನಸೇವಕ ಚಳವಳಿ ಹಮ್ಮಿಕೊಂಡಿದೆ.ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಭದ್ರಾ ಕಾಮಗಾರಿಗೆ ಅನುದಾನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ರೋಹವೆಸಗುತ್ತಿವೆ. ಜಿಲ್ಲೆಯ ಜನ ಪ್ರತಿನಿಧಿಗಳು ಎಚ್ಚರ ತಪ್ಪಿ ಮಲಗಿದ್ದು ಅವರನ್ನು ಏಳಿಸುವ ಕೆಲಸವಾಗಬೇಕಿದೆ. ಹಾಗಾಗಿ, ಸಂಸದ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಮನೆ ಮುಂಭಾಗ ತಮಟೆ ಬಾರಿಸುವುದರ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕೆಂದು ಸಭೆ ಅಭಿಪ್ರಾಯಪಟ್ಟಿತು.
ಎದ್ದೇಳು ಜನ ಸೇವಕ ಚಳವಳಿ ಆರಂಭದಲ್ಲಿ 29ರಂದು ಸಂಸದ ಗೋವಿಂದ ಕಾರಜೋಳ ಮನೆ ಮುಂಭಾಗ ತಮಟೆ ಬಾರಿಸಲು ಸಭೆ ತೀರ್ಮಾನಿಸಿತು. ನಂತರ ಎಲ್ಲ ಶಾಸಕರ ಮನೆ ಮುಂಭಾಗ ಒಂದೊಂದು ದಿನ ಹಾಗೂ ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಚಳವಳಿ ನಡೆಯಲಿದೆ.ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ಭದ್ರಾ ಮೇಲ್ದಂಡೆಗೆ ಅನುದಾನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತಾಳಿವೆ. ಬಾಕಿ ಬಿಲ್ ಪಾವತಿಸದ ಕಾರಣ ಕಾಮಗಾರಿ ನಿರ್ವಹಿಸುತ್ತಿದ್ದ ಆದಿತ್ಯ ಕನ್ ಸ್ಟ್ರಕ್ಷನ್ ಕಂಪನಿ ಹಾಗೂ ಅಮೃತ ಕನ್ ಸ್ಟ್ರಕ್ಷನ್ ಕಂಪನಿಗಳು ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಗೆ ಪತ್ರ ಬರೆದು ಕಾಮಗಾರಿ ಸ್ಥಗಿತಗೊಳಿಸಿ ವಾಪಾಸ್ ಹೋಗುತ್ತಿದ್ದೇವೆ. ನಮ್ಮ ಬಿಲ್ ಸೆಟ್ಲ್ ಮೆಂಟ್ ಮಾಡುವಂತೆ ಮನವಿ ಮಾಡಿವೆ.
ಈ ಎರಡೂ ಕಂಪನಿಗಳಿಗೆ ಬರೋಬ್ಬರಿ ಐದು ನೂರು ಕೋಟಿಗೂ ಹೆಚ್ಚು ಹಣ ಪಾವತಿ ಮಾಡಬೇಕಿದೆ. ಈ ಕಂಪನಿಗಳು ಫೀಲ್ಡ್ ನಿಂದ ಕಾಲ್ಕಿತ್ತರೆ ಮರಳಿ ಕರೆದುಕೊಂಡು ಬರುವುದು ಕಷ್ಟ. ರಾಜ್ಯ ಸರ್ಕಾರ ಕೂಡಲೇ ಈ ಕಂಪನಿಗಳು ಹೊರ ಹೋಗದಂತೆ ತಡೆಯಬೇಕು. ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಯಾದವರೆಡ್ಡಿ ಆಗ್ರಹಿಸಿದರು.ಭದ್ರಾ ಮೇಲ್ದಂಡೆ ಕಾಮಗಾರಿ 2007-08 ರಲ್ಲಿ ಆರಂಭವಾಗಿದ್ದು, ಇದುವರೆಗೂ 9700 ರು. ಕೋಟಿ ರು. ರಾಜ್ಯ ಸರ್ಕಾರ ವ್ಯಯ ಮಾಡಿದೆ. ಆದರೆ, 2014 ರಲ್ಲಿ ಶುರುವಾದ ಎತ್ತಿನಹೊಳೆ ಯೋಜನೆಗೆ 15900 ಕೋಟಿ ರು. ಖರ್ಚು ಮಾಡಿದೆ. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವುದರ ಹಿಂದೆ ಇರುವ ರಾಜಕೀಯ ಇಚ್ಚಾಶಕ್ತಿ , ಭದ್ರಾ ಮೇಲ್ದಂಡೆಗೆ ಇಲ್ಲದಂತಾಗಿದೆ ಎಂದರು.
ಬೇಡರೆಡ್ಡಿ ಬಸವರೆಡ್ಡಿ ಮಾತನಾಡಿ, ಕಾಮಗಾರಿ ನಿರ್ವಹಣೆ ಮಾಡುವ ಕಂಪನಿಗಳು ಯಾವುದೇ ಕಾರಣದಿಂದ ಹೊರ ಹೋಗದಂತೆ ತಡೆವ ಕೆಲಸವಾಗಬೇಕು. ಸರ್ಕಾರ ಈ ಸಬೂಬು ಹೇಳಿ ಮತ್ತೊಂದಿಷ್ಟು ದಿನ ಕಾಲ ನೂಕುವ ಅಪಾಯವಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಕ್ಷಣವೇ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿ, ಕಂಪನಿಗಳು ಹೊರ ಹೋಗದಂತೆ ನೋಡಿಕೊಳ್ಳಬೇಕು. ಹಾಗೊಂದು ವೇಳೆ ಕಂಪನಿಗಳು ಇಲ್ಲಿಂದ ಕಾಲ್ಕಿತ್ತಲ್ಲಿ ಮತ್ತೆ ಹೊಸದಾಗಿ ಟೆಂಡರ್ ಕರೆದು ಏಜೆನ್ಸಿ ಫಿಕ್ಸ್ ಮಾಡುವಲ್ಲಿ ಮತ್ತಷ್ಟು ವಿಳಂಬವಾಗುತ್ತದೆ. ಅರ್ಧಕ್ಕೆ ನಿಂತ ಕಾಮಗಾರಿ ಮುಂದುವರಿಸಲು ಯಾರೂ ಬರುವುದಿಲ್ಲವೆಂಬ ಕನಿಷ್ಟ ಪ್ರಜ್ಞೆ ಸರ್ಕಾರಕ್ಕೆ ಇರಬೇಕು ಎಂದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಕರುನಾಡ ಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಕಾರ್ಯಾಧ್ಯಕ್ಷ ಹೊರಕೇರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜಿಲ್ಲಾ ಮಹಿಳಾ ಅಧ್ಯಕ್ಷ ದೊಡ್ಡಸಿದ್ದವ್ವನಹಳ್ಳಿ ಸುಧಾ, ಹಿರಿಯೂರು ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಚೇತನ ಯಳನಾಡು, ಜಾನುಕೊಂಡ ತಿಪ್ಪೇಸ್ವಾಮಿ, ಸಿದ್ದೇಶ್ ಜಾನುಕೊಂಡ, ತಾಲೂಕು ಅಧ್ಯಕ್ಷ ಇಸಾಮುದ್ರ ಪ್ರಭು, ಹುಣಿಸೆಕಟ್ಟೆ ಕಾಂತರಾಜ್,ಮುದ್ದಾಪುರ ನಾಗಣ್ಣ, ರಂಗೇಗೌಡ, ಮೊಳಕಾಲ್ಮುರು ಮಂಜುನಾಥ ಸಭೆಯಲ್ಲಿ ಪಾಲ್ಗೊಂಡಿದ್ದರು.
------------------ಪೋಟೋ ಕ್ಯಾಪ್ಸನ್
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿದರು.----------
ಫೋಟೋ ಫೈಲ್ ನೇಮ್- 26 ಸಿಟಿಡಿ1--