ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದ್ದು, ರೈತರಿಂದ ಯೂರಿಯಾ ಗೊಬ್ಬರಕ್ಕೆ ಮತ್ತೆ ಬೇಡಿಕೆ ಹೆಚ್ಚಿದೆ.

ಕಳೆದ ಒಂದೂವರೆ ತಿಂಗಳಿಂದ ಮಳೆಯಾಗದ ಕಾರಣ ಸಜ್ಜೆ, ಜೋಳ, ಮೆಕ್ಕೆಜೋಳ, ತೊಗರಿ, ಎಳ್ಳು ಸೇರಿದಂತೆ ನಾನಾ ಬೆಳೆ ಸಂಪೂರ್ಣ ಬಾಡಿವೆ. ವಾರದಿಂದ ಮಳೆಯಾಗುತ್ತಿದ್ದು, ತಡವಾಗಿ ಬಿತ್ತನೆಗೊಂಡ ಸಜ್ಜೆ, ಮೆಕ್ಕೆಜೋಳ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯತೆ ಇದೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ.

ಯಲಬುರ್ಗಾ ತಾಲೂಕಿನಲ್ಲಿ ೨೦೨೬-೨೭ನೇ ಸಾಲಿನಲ್ಲಿ ೭೦೯೫೧ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ ೨೮೭೯೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಗೊಂಡ ಬೆಳೆಗಳು ಒಣಗಿವೆ. ಸಾಧಾರಣ ಮಳೆಯಿಂದ ಸಜ್ಜೆ, ತೊಗರಿ ಸೇರಿದಂತೆ ನಾನಾ ಬೆಳೆಗೆ ಜೀವಕಳೆ ಬಂದಿದೆ. ಬೆಳೆಗಳು ಕುಂಠಿತವಾಗಿದ್ದು, ಯೂರಿಯಾ ಅವಶ್ಯಕತೆ ಇದೆ.

ರಿಯಾಯಿತಿ ಬೆಲೆಗೆ ವಿತರಿಸಿ: ಹಿರೇವಂಕಲಕುಂಟಾ ಗ್ರಾಮದಲ್ಲಿ ನೂರಾರು ರೈತರು ಯೂರಿಯಾ ಗೊಬ್ಬರಕ್ಕಾಗಿ ಅಂಗಡಿ ಮುಂದೆ ಸರದಿ ಸಾಲಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತು. ರೈತರು ಹಲವು ಗಂಟೆಗಳ ಕಾಲ ಗೊಬ್ಬರಕ್ಕಾಗಿ ಕಾಯುವ ಪರಿಸ್ಥಿತಿ ಉಂಟಾಗಿತ್ತು. ೪೫ ಕೆಜಿ ತೂಕ ಇರುವ ಯೂರಿಯಾ ಗೊಬ್ಬರ ಅಧಿಕೃತ ಬೆಲೆಗೆ ಮಾರಾಟ ಮಾಡಬೇಕು ಎಂದು ರೈತರು ಒತ್ತಾಯಿಸಿದರು.


ರೈತರಿಗೆ ನಿಗದಿತ ದರದಲ್ಲಿಯೇ ಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ಹೆಚ್ಚು ಹಣ ವಸೂಲಿ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಮಳೆಯಾಗಿದ್ದು, ರೈತರು ರಸಗೊಬ್ಬರಕ್ಕಾಗಿ ಮುಗಿಬಿದ್ದಿದ್ದು, ಸಮರ್ಪಕವಾಗಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ರೈತರು ಯಾವುದೇ ಸಮಸ್ಯೆ ಇದ್ದರೆ ಹತ್ತಿರದ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಯಲಬುರ್ಗಾ ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.

ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿದೆ. ರೈತರ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಇದ್ದು, ಅಂಗಡಿ ಮಾಲೀಕರು ರಿಯಾಯಿತಿ ದರದಲ್ಲಿ ಯೂರಿಯಾ ಮಾರಾಟ ಮಾಡಬೇಕು ಎಂದು ಯಲಬುರ್ಗಾ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಈಶಪ್ಪ ವಕ್ರ ತಿಳಿಸಿದ್ದಾರೆ.