ರಾಜ್ಯಾದ್ಯಂತ ತಲೆದೋರಿರುವ ಬರದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಹಗರಿಬೊಮ್ಮನಹಳ್ಳಿ: ಇಡೀ ರಾಜ್ಯಕ್ಕೆ ರಾಜ್ಯವೇ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರೈತ ವರ್ಗದ ಉಳಿವಿಗಾಗಿ ಇಡೀ ರಾಜ್ಯವನ್ನೇ ಬರ ಪೀಡಿತ ಪ್ರದೇಶವೆಂದು ಘೋಷಿಸಿ ತುರ್ತು ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ಟರು ಆಗ್ರಹಿಸಿದರು.
ಬರ ಪರಿಹಾರ ಕಾಮಗಾರಿಗಳ ತುರ್ತು ಜಾರಿಗೆ ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದ ಪದಾಧಿಕಾರಿಗಳು ಇಲ್ಲಿನ ತಹಸೀಲ್ದಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ನಿಯೋಗದ ನೇತೃತ್ವ ವಹಿಸಿದ್ದ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯಾದ್ಯಂತ ತಲೆದೋರಿರುವ ಬರದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜನ ಜಾನುವಾರುಗಳಿಗೆ ನೀರು ಮತ್ತು ಮೇವು ಸಿಗದಂತಾಗಿದೆ. ಬಿತ್ತನೆ ವೈಫಲ್ಯ ಸೇರಿದಂತೆ ಬತ್ತಿರುವ ಕೊಳವೆ ಬಾವಿಗಳ ಅಂತರ್ಜಲದಿಂದ ನಾಡಿನ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕೂಡಾ ಮರೀಚಿಕೆಯಾಗಿ ಗ್ರಾಮೀಣ ಕೂಲಿಕಾರರು ಉದ್ಯೋಗ ಅರಸಿ ನಗರ ಪ್ರದೇಶದತ್ತ ವಲಸೆ ಹೋಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಇದು ಸಾಮಾನ್ಯ ಬರಗಾಲವಲ್ಲ, ಗ್ರಾಮೀಣ ಭಾಗ ಸಹಿತ ನಗರ ಪ್ರದೇಶಗಳ ಜನರ ಜೀವನ ಸಂಕಷ್ಟದ ಅಂಚಿಗೆ ದೂಡಿದೆ. ಮಳೆ ಅಭಾವ, ಬೆಳೆ ಹಾನಿ, ಅಂತರ್ಜಲ ಕುಸಿತ, ನೀರು ಮೇವಿನ ಕೊರತೆ, ಉದ್ಯೋಗದ ಅಲಭ್ಯತೆ ಹಾಗೂ ಜನರ ವಲಸೆ ಆಧಾರದ ಮೇಲೆ ರಾಜ್ಯದ ಎಲ್ಲ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಪ್ರದೇಶಗಳ ಸಮಗ್ರ ಬರ ಪರಿಸ್ಥಿತಿಯ ಮೌಲ್ಯಮಾಪನ ನಡೆಯಬೇಕು ಎಂದು ಪ್ರತಿಪಾದಿಸಿದರು.ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ ಮಾತನಾಡಿ, ವೈಜ್ಞಾನಿಕವಾಗಿ ಬೆಳೆ ಹಾನಿ ಪರಿಶೀಲಿಸಬೇಕು. ಸಹಕಾರ ಸಂಘಗಳ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಹಾರ ಕಾಮಗಾರಿ ಜಾರಿಗೊಳಿಸುವ ಜತೆಗೆ ಅಲ್ಪ ಆವಧಿಯ ಬೆಳೆ ಬೆಳೆಯಲು ಸರ್ಕಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿನ ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.ಜೆಡಿಎಸ್ ಹಾಗೂ ರೈತ ಮುಖಂಡ ಕಿನ್ನಾಳ್ ಸುಭಾಷ್, ಈ.ಕೃಷ್ಣಮೂರ್ತಿ, ಡಿಶ್ ಪಾಂಡುರಂಗ ನಾಯ್ಕ, ಚಿತವಾಡಗಿ ಪ್ರಕಾಶ್, ಆಡೂರ್ ಕೊಟ್ರಬಸಪ್ಪ, ರುದ್ರೇಶ್ ಕಲಾಲ್, ಪ್ರಭಾಕರ್, ಮಹಾದೇವಪ್ಪ, ಹಾಗೂ ಜಂಬಪ್ಪ ನಿಯೋಗದಲ್ಲಿದ್ದರು.