ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Oct 17 2024, 12:47 AM IST

ಸಾರಾಂಶ

ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬುಧವಾರ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಸಭೆ ನಡೆಸಿ ನಂತರ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಮೂಲಕ ಸಕ್ಕರೆ ಸಚಿವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಮುಖಂಡರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬುಧವಾರ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಸಭೆ ನಡೆಸಿ ನಂತರ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಮೂಲಕ ಸಕ್ಕರೆ ಸಚಿವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ಕೊಡೋಳ್ಳಿ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಕಮತ, ಸೋಮಲಿಂಗಪ್ಪ ಮೆಳ್ಳಿಕೇರಿ, ಬಸವರಾಜ ಮೊಕಾಶಿ, ಗೂಳಪ್ಪ ಹೊಳಿ ಮಾತನಾಡಿ, ಸರ್ಕಾರ ರಾಜ್ಯದಲ್ಲಿ ಕಬ್ಬು ಬೆಳಗಾರರ ಬಗ್ಗೆ ಸಾಕಷ್ಟು ಅನಕೂಲಕರವಾದ ಕ್ರಮ ತೆಗೆದುಕೊಂಡಿರುವುದು ಶ್ಲಾಘನೀಯ. ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೆ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಅತೀ ಹೆಚ್ಚು ಕಾರ್ಖಾನೆಗಳನ್ನು ಹೊಂದಿದೆ. ಖಾಸಗಿ ಕಾರ್ಖಾನೆಯ ಹಾವಳಿ ತಪ್ಪಿಸಲು ಈ ಹಿಂದೆ ಮಾಜಿ ಶಾಸಕರಾಗಿದ್ದ ದಿ.ರಮೇಶ ಬಾಳೇಕುಂದರಗಿ ಹಾಗೂ ಅವರ ಸಮಾನ ಮನಸ್ಕ ತಂಡದ ಮೇಲೆ ವಿಶ್ವಾಸವನ್ನಿಟ್ಟು 30 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡ ಸಹಕಾರಿ ಕಾರ್ಖಾನೆ ಯಾವುದೋ ಲಾಬಿಗೆ ಒಳಗಾಗಿ ಸಾಲದ ಸುಳಿಯಲ್ಲಿ ಸಿಕ್ಕು ನರಳಾಡುತ್ತಿದೆ ಎಂದರು.ಪ್ರಸ್ತುತ ವರ್ಷ ರೈತರ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವ ಮೊದಲೇ ಕಾರ್ಖಾನೆಯ ಮುಖ್ಯ ಟಿಸಿಯಲ್ಲಿರುವ ನೂರಾರು ಕೆಜಿ ತಾಮ್ರದ ತಂತಿ, ನೂರಾರು ಲೀಟರ್‌ ಟಿಸಿ ಎಣ್ಣೆಯ ಕಳ್ಳತನವಾಗಿದೆ. ಇದು ಮೇಲ್ನೋಟಕ್ಕೆ ನೋಡಿದರೇ ಕಾಣದ ಕೈಗಳ ಕಾರ್ಯ ಎನಿಸುತ್ತಿದೆ. ಏಕೆಂದರೆ ಈ ಟಿಸಿ ಬಿಚ್ಚಿ ಈ ಕಾರ್ಯ ಮಾಡಲು ಕನಿಷ್ಠ ವಾರವೇ ಬೇಕಾಗುತ್ತದೆ. ಕಾರ್ಖಾನೆಯಲ್ಲಿ ಸಿಸಿ ಕ್ಯಾಮೆರಾ ಮತ್ತು 24 ಗಂಟೆ ಭದ್ರತೆ ಇದ್ದಾಗಲು ₹70 ಲಕ್ಷಕ್ಕೂ ಅಧಿಕ ಬೆಲೆಬಾಳುವ ಕಾರ್ಖಾನೆಯ ವಸ್ತುಗಳು ಕಳ್ಳತನ ನಡೆದಿರುವುದು ಅನುಮಾನ ಹುಟ್ಟಿಸುತ್ತಿದೆ ಎಂದರು.ಕಾರ್ಖಾನೆಯು ನಿಯಮ ಬಾರ ಸಾಲ ಮಾಡಿರುವುದನ್ನು ನ್ಯಾಯಾಂಗ ಮತ್ತು ಸಿಬಿಐ ತನಿಖೆಗೆ ಒಳಪಡಿಸಬೇಕು. ಕಾರ್ಖಾನೆಯ ಆವರಣದಲ್ಲಿ ಟಿಸಿ ವಸ್ತುಗಳ ಕಳವು ಪ್ರಕರಣವನ್ನು ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮವನ್ನು ಸರ್ಕಾರ ಘೋಷಿಸಿದ ನವೆಂಬರ್ 15 ರೊಳಗೆ ಪ್ರಾರಂಭಕ್ಕೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು. ಈ ಎಲ್ಲ ತನಿಖೆ ಪೂರ್ಣಗೊಳ್ಳುವವರೆಗೆ ಕಾರ್ಖಾನೆಯನ್ನು ಸುಪರ್ ಸೀಡ್‌ಗೊಳಿಸಿ ಸರ್ಕಾರ ತನ್ನ ಸುಪರದಿಗೆ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಬೀರಪ್ಪ ದೇಶನೂರ, ಬಸನಗೌಡ ಪಾಟೀಲ, ಮಹಾಂತೇಶ ಗೌರಿ, ಶಾಂತಪ್ಪ ಜೈನರ್, ನಿಂಗಪ್ಪ ಪಟಾತ, ವಿರುಪಾಕ್ಷಪ್ಪ ಜೀರಿಗವಾಡ, ದಿಲಾವರಸಾಬ್‌ ಧೂಪದಾಳ, ಮಲ್ಲಿಕಾರ್ಜುನ ಅಂದಾನಶೆಟ್ಟಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. ಈ ಭಾಗದ ರೈತರ ಹಿತದೃಷ್ಟಿಯಿಂದ ಹಾಗೂ ಕಾರ್ಖಾನೆಯನ್ನು ಮುಚ್ಚಲು ಸಂಚು-ಹೊಂಚು ಹಾಕುತ್ತಿರುವ ದುಷ್ಟ ಶಕ್ತಿಗಳಿಂದ ಕಾರ್ಖಾನೆ ಉಳಿವಿಗಾಗಿ ಮತ್ತು ಖಾಸಗಿಯವರಿಗೆ ಲಿಜ್ ಕೊಡುವ ಹುನ್ನಾರು ತಪ್ಪಿಸಬೇಕು. ಸಹಕಾರದಡಿಯಲ್ಲೇ ಕಾರ್ಖಾನೆಯ ಮುಂದುವರೆಯುವ ಉದ್ದೇಶದಿಂದ ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೇ ರೈತ ಸಮುದಾಯ ಬೀದಿಗಿಳಿದು ಹೋರಾಟ ನಡೆಸಲಿದೆ.

- ಗೂಳಪ್ಪ ಹೊಳಿ ಹಾಗೂ ಮಲ್ಲಿಕಾರ್ಜುನ ಹುಂಬಿ

ರೈತ ಮುಖಂಡರು.