ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್‌ಗಳ ಎಲ್‌ಟಿ೪ಸಿ ಸಂಪರ್ಕದ ಬಾಕಿ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಗೌಡಳ್ಳಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.ಗೌಡಳ್ಳಿ ಶ್ರೀ ನವದುರ್ಗಾ ಪರಪಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಜಿ.ಎಸ್. ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕಾಫಿ ಬೆಳೆಗಾರರು, ರೈತರು ಸಮಸ್ಯೆ ಹೇಳಿಕೊಂಡರು. ಅಕಾಲಿಕ ಮಳೆ, ಹವಾಮಾನ ವೈಪ್ಯರಿತ್ಯದಿಂದ ಕಾಫಿ ತೋಟಗಳು ರೋಗಪೀಡಿತವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರ ಕಾಫಿ ಫಸಲು ಹಾನಿಯಾಗುತ್ತಿದೆ. ಬೆಳೆಗಾರರು ಸಾಲಗಾರರಾಗಿದ್ದಾರೆ. ಕೆಲ ವಾಣಿಜ್ಯ ಬ್ಯಾಂಕ್‌ಗಳು ಸಾಲಕ್ಕೆ ಅಡ ಇಟ್ಟಿರುವ ಕಾಫಿ ತೋಟಗಳನ್ನು ಹರಾಜು ಹಾಕುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಕೂಡಲೆ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಬೆಳೆಗಾರರಾದ ಶುಂಠಿ ಗ್ರಾಮದ ಎಸ್.ಬಿ. ಭರತ್‌ಕುಮಾರ್, ಹಣಕೋಡು ಗ್ರಾಮದ ಎಚ್.ಆರ್. ಸುರೇಶ್, ಹಿರಿಕರ ಗ್ರಾಮದ ಎಚ್.ಈ. ರಮೇಶ್, ಕೂಗೂರು ಗ್ರಾಮದ ಸಂದೀಪ್ ಮತ್ತಿತರರು ಆಗ್ರಹಿಸಿದರು.
ನಿಗದಿತ ಸಮಯದಲ್ಲಿ ಮಳೆ ಬೀಳುತ್ತಿಲ್ಲ. ಹೂಮಳೆ ಇಲ್ಲದಂತಾಗಿದೆ. ಕಾಫಿ ಕೊಯ್ಲಿನ ಸಂದರ್ಭದಲ್ಲಿ ಮಳೆಬಿದ್ದು ಫಸಲು ಮಣ್ಣು ಸೇರುತ್ತಿದೆ. ಪಂಪ್‌ಸೆಟ್‌ಗಳ ಮೂಲಕ ನೀರನ್ನು ಹಾರಿಸಿ, ಹೂ ಅರಳಿಸಬೇಕು. ಬ್ಯಾಕಿಂಗ್ ನೀರು ಕೊಡಬೇಕು. ಕಾಫಿ ಉತ್ಪಾದನೆಯನ್ನು ಹೆಚ್ಚಿಸಬೇಕಾದರೆ ಕಾಫಿ ಬೆಳೆಗಾರರ ೧೦ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಸೆಸ್ಕ್ನ ಬಡ್ಡಿ ಚಕ್ರಬಡ್ಡಿಯಿಂದ ಈಗಾಗಲೇ ಕಾಫಿ ಬೆಳೆಗಾರರ ಬಾಕಿ ವಿದ್ಯುತ್ ಬಿಲ್ ಲಕ್ಷ ದಾಟುತ್ತಿದೆ. ಈ ಕಾರಣದಿಂದ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಬೆಳೆಗಾರರು ಆಗ್ರಹಿಸಿದರು.ಎಲ್‌ಟಿ೪ಸಿಯ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಸರ್ಕಾರದಿಂದ ತಾತ್ಕಾಲಿಕ ತಡೆ ಇದೆ. ಉಚಿತ ವಿದ್ಯುತ್, ಬಿಲ್ ಮನ್ನಾ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎಂದು ಸೆಸ್ಕ್ ಜೂನಿಯರ್ ಎಂಜಿನಿಯರ್ ಸುದೀಪ್ ಸಭೆಯ ಗಮನಕ್ಕೆ ತಂದರು.
ಗದ್ದೆ ಬದುವಿನಲ್ಲಿ ಮತ್ತು ಕಾಫಿ ತೋಟದೊಳಗೆ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಯಲ್ಲಿ ಹಾಕಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುದೀಪ್ ಸಭೆಯಲ್ಲಿ ತಿಳಿಸಿದರು.ಕೂಗೂರು ಗ್ರಾಮದ ಬೆಟ್ಟದಲ್ಲಿ ಆನೆ ಕಂದಕ ತೋಡಲಾಗಿದೆ. ಮಳೆಗಾಲದಲ್ಲಿ ಕಂದಕದಲ್ಲಿ ನೀರು ಸಂಗ್ರಹವಾಗಿ ಬೆಟ್ಟ ಕುಸಿಯುವ ಭೀತಿ ಇದೆ. ಬೆಟ್ಟ ಕುಸಿದರೆ ಅರಣ್ಯ ಇಲಾಖೆ ನೇರ ಜವಾಬ್ದಾರಿಯಾಗಬೇಕಾಗುತ್ತದೆ. ಸೋಲಾರ್ ತಂತಿ ಬೇಲಿಯ ನಿರ್ವಹಣೆಯಾಗುತ್ತಿಲ್ಲ ಎಂದು ಕೂಗೂರು ಸಂದೀಪ್ ಸಭೆಯ ಗಮನಕ್ಕೆ ತಂದರು. ಸೋಲಾರ್ ತಂತಿ ಬೇಲಿ ನಿರ್ವಹಣೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಒಂದಷ್ಟು ಸಮಸ್ಯೆಯಾಗಿತ್ತು. ಕಂದಕದಲ್ಲಿ ನೀರು ಸಂಗ್ರಹದ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಿಆರ್‌ಎಫ್‌ಒ ಎಂ.ಜೆ. ಸೂರ್ಯ ತಿಳಿಸಿದರು.
ಕಾಮಗಾರಿ ಕಳಪೆಯಾಗಿದ್ದರೆ ದೂರು ನೀಡಿ: ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆಯಿಂದ ನಡೆಯುವ ಕೆಲ ರಸ್ತೆ ಕಾಮಗಾರಿಗಳು ಒಂದೇ ವರ್ಷದಲ್ಲಿ ಹಾಳಾಗುತ್ತಿವೆ. ಇನ್ನಾದರೂ ಗುಣಮಟ್ಟ ಕೆಲಸವಾಗಬೇಕು ಎಂದು ಹೇಳಿದರು. ಕಾಮಗಾರಿ ಕಳಪೆಯಾಗಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದು. ಗುಣಮಟ್ಟದ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದು ಎಂಜಿನಿಯರ್ ಸಲೀಂ ಭರವಸೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಸುಮಾ, ರೋಹಿಣಿ, ವಿಶಾಲಾಕ್ಷಿ, ಮಂಜುನಾಥ್, ವೆಂಕಟೇಶ್, ರವಿಕುಮಾರ್, ಅಜ್ಜಳ್ಳಿ ನವೀನ್, ಗಣೇಶ್, ಪಿಡಿಒ ಲಿಖಿತಾ, ನೋಡೆಲ್ ಅಧಿಕಾರಿ ಪಶುವೈದ್ಯಕೀಯ ಇಲಾಖೆಯ ಸತೀಶ್ ಇದ್ದರು. ಬಿಲ್‌ಕಲೆಕ್ಟರ್ ಹೂವಯ್ಯ ಅಭಿವೃದ್ಧಿ ಕಾಮಗಾರಿಗಳ ವಿವರ ಓದಿದರು.