ಮುಸ್ಲಿಂರಿಗೆ ಕಾಮಗಾರಿಗಳಲ್ಲಿ ಶೇ.೪ ಮೀಸಲಾತಿ ವಿಧೇಯಕ ವಾಪಸ್ಸಿಗೆ ಆಗ್ರಹ

| Published : Apr 10 2025, 01:00 AM IST

ಮುಸ್ಲಿಂರಿಗೆ ಕಾಮಗಾರಿಗಳಲ್ಲಿ ಶೇ.೪ ಮೀಸಲಾತಿ ವಿಧೇಯಕ ವಾಪಸ್ಸಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ ಮೀಸಲಾತಿ ನೀಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಸದರಿ ವಿಧೇಯಕಕ್ಕೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ ಮೀಸಲಾತಿ ನೀಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಸದರಿ ವಿಧೇಯಕಕ್ಕೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿದರು.

ರಾಜ್ಯ ಸರ್ಕಾರ ೨ ಕೋಟಿವರೆಗಿನ ಸಿವಿಲ್ ವರ್ಕ್ಸ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮತ್ತು ೧ ಕೋಟಿ ವರೆಗಿನ ಸರಕು ಮತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.೪ ಮೀಸಲಾತಿ ನೀಡಲು ಅನುಮತಿ ಕೋರಿ ಕೆಟಿಟಿಪಿ ಕಾಯಿದೆಗೆ ತಿದ್ದುಪಡಿ ಮಾಡಿ ರಾಜ್ಯಪಾಲರ ಅನುಮೋಧನೆಗೆ ಕಳುಹಿಸಿದೆ ಎಂದು ಖಂಡಿಸಿದರು.

ಸಂವಿಧಾನ ರಚಿಸುವಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ವಿವಿಧ ರಾಜ್ಯಗಳಲ್ಲಿ ಇಂತಹ ಧರ್ಮಾಧಾರಿತ ಮೀಸಲಾತಿ ನೀಡಲು ಮುಂದಾದಾಗ ನ್ಯಾಯಾಲಯಗಳು ತಿರಸ್ಕರಿಸಿವೆ, ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಶೇ.೪ ಮೀಸಲಾತಿ ನೀಡುವ ಮೂಲಕ ಓಟ್ ಬ್ಯಾಂಕ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಸುಪ್ರೀಂಕೋರ್ಟ್ ಸಹ ಧರ್ಮಾಧಾರಿತ ಮೀಸಲಾತಿ ರದ್ದುಗೊಳಿಸಿದೆ, ಮೀಸಲಾತಿ ಪ್ರಯೋಜನಗಳಿಗಾಗಿ ೭೭ ಸಮುದಾಯಗಳನ್ನು ಓಬಿಸಿ ಎಂದು ವರ್ಗೀಕರಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ, ಆದ್ದರಿಂದ ಧರ್ಮಾಧಾರಿತ ಮೀಸಲಾತಿ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುವುದರಿಂದ ಯಾವುದೇ ಕಲ್ಯಾಣ ಉದ್ದೇಶವಿಲ್ಲದ ಅಸಂವಿಧಾನಿಕ ನೀತಿಯ ಮಸೂದೆಗೆ ಒಪ್ಪಿಗೆ ನೀಡಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಮುಸ್ಲಿಂರಿಗೆ ಇಂತಹ ನಾಗರಿಕ ಸೇವೆಯಲ್ಲಿ ಮೀಸಲಾತಿ ನೀಡುವ ಮೂಲಕ ರಾಷ್ಟ್ರೀಯ ಏಕತೆ, ಸಮಗ್ರತೆ, ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ, ಈ ನಿಟ್ಟಿನಲ್ಲಿ ಮಸೂದೆಯನ್ನು ಅನುಮೋಧಿಸಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು, ಕೋಮು ಭಾವನೆ ಪ್ರಚೋದಿಸುತ್ತಿರುವ ಕಾಂಗ್ರೆಸ್‌ನ ತುಷ್ಟೀಕರಣ ನೀತಿ ಬದಲಾಗಬೇಕು, ರಾಜ್ಯದಲ್ಲಿ ಸೌಹಾರ್ದತೆ ನೆಲೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಜರಂಗದಳ ಹಾಗೂ ವಿಹಿಂಪ ಮುಖಂಡರಾದ ಬಾಲಾಜಿ, ಬಾಬು, ಅಪ್ಪಿ, ವಿಶ್ವನಾಥ್, ಶ್ರೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಪಕ್ಷದ ಮುಖಂಡರಾದ ಮಂಜುನಾಥ್, ಸಾಮಾ ಬಾಬು, ನಾಮಾಲ ಮಂಜು, ಬಾಲಾಜಿ, ಓಂಪ್ರಕಾಶ್, ಸಾಯಿಮೌಳಿ, ಸಾಯಿ ಸುಮನ್, ವಿನಯ್, ವಿಶ್ವ, ಎಬಿವಿಪಿ ಹರಿ, ಮುರಳಿ, ಕಾಂತರಾಜ್, ಮಹೇಶ್, ಮಂಜು, ಆದಿ, ಶಶಿ, ದೀಪು, ವಿಶಾಕ, ಸೂರಿ, ಸುರೇಶ್,ಭವಾನಿ, ಸ್ನೇಕ್ ರವಿ, ಚಲಪತಿ ಮತ್ತಿತರರು ಪಾಲ್ಗೊಂಡಿದ್ದರು.