ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲು ಆಗ್ರಹ

| Published : Jun 16 2024, 01:56 AM IST / Updated: Jun 16 2024, 06:59 AM IST

ಸಾರಾಂಶ

 ಅವ್ಯವಹಾರ ಆರೋಪದ ಮೇಲೆ ತೋಟಗಾರಿಕೆ ಇಲಾಖೆಯಲ್ಲಿ ಇತ್ತೀಚೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಕ್ರಮ ಸರಿಯಾದುದಲ್ಲ. ಆದ್ದರಿಂದ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶನಿವಾರ ರೈತರು ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಿಗೆ ಮನವಿ ಸಲ್ಲಿಸಿದರು.

 ಬೆಳಗಾವಿ :  ಅವ್ಯವಹಾರ ಆರೋಪದ ಮೇಲೆ ತೋಟಗಾರಿಕೆ ಇಲಾಖೆಯಲ್ಲಿ ಇತ್ತೀಚೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಕ್ರಮ ಸರಿಯಾದುದಲ್ಲ. ಆದ್ದರಿಂದ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶನಿವಾರ ರೈತರು ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಿಗೆ ಮನವಿ ಸಲ್ಲಿಸಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ಸವಸುದ್ದಿ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ ಅಶೋಕ ಕರೆಪ್ಪಗೋಳ ಅವರನ್ನು ಅಮಾನಗೊಳಿಸಲಾಗಿದೆ. ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ರೈತರು ಆಗ್ರಹಿಸಿದರು. ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಕೆಲ ರೈತರು ಹಾಗೂ ರೈತ ಸಂಘಟನೆಯವರು ಶೆಡ್‌ನೆಟ್‌ ಯೋಜನೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮ ಎಸಗಿದ್ದಾರೆ ಎಂದು ಧರಣಿ ನಡೆಸಿ ಮನವಿ ಸಲ್ಲಿಸಿದ್ದರಿಂದ ಅಮಾನತಿಗೆ ಕಾರಣವಾಗಿದೆ. 

ಆದರೆ ಈಗಾಗಲೇ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ಕೈಗೊಳ್ಳಲಾಗಿದ್ದು, ಅಧಿಕಾರಿಗಳಿಂದ ಯಾವುದೇ ಅಕ್ರಮ ಎಸಗದಿರುವುದು ಕಂಡು ಬಂದಿದೆ. ಆದರೂ ಇಲಾಖೆಯ ವರದಿಯನ್ನು ಅಲ್ಲಗಳೆದು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯದಿದ್ದಲ್ಲಿ ಜೂನ್‌ 19 ರಿಂದ ತಮ್ಮ ಕಚೇರಿ ಎದುರು ಬೃಹತ್‌ ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭೀರಪ್ಪ, ಲಕ್ಕಪ್ಪ, ವಿಠ್ಠಕ ಹಿರೇಕೋಡಿ, ಪ್ರಭು, ಶಿವಾನಂದ, ಆಲಗೊಂಡ, ಶಶಿಕಾಂತ ನಾಗನೂರು, ಅಶೋಕ ಸೇರಿದಂತೆ ಮೊದಲಾದವರು ಇದ್ದರು.