ಸಾರಾಂಶ
ವಕ್ಫ್ ಹೆಸರು ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದಿಂದ ಪ್ರತಿಭಟನೆ । ಸರ್ಕಾರ, ವಕ್ಫ್ ಮಂಡಳಿ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ಕಾರಟಗಿಬಹಳ ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರ ಜಮೀನುಗಳ ಪಹಣಿ ಪತ್ರಿಕೆಯಲ್ಲಿ ವಕ್ಫ್ ಎಂದು ನಮೂದಿಸುವ ಮೂಲಕ ರೈತರನ್ನು ಸರ್ಕಾರ ಆತಂಕಕ್ಕೆ ತಳ್ಳಿದೆ. ಶೀಘ್ರವೇ ರಾಜ್ಯದ ಎಲ್ಲ ಕಡೆಗಳಲ್ಲಿ ಪಹಣಿ ಪತ್ರಿಕೆಯಲ್ಲಿನ ವಕ್ಫ್ ಹೆಸರು ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಶರಣಪ್ಪ ದೊಡ್ಮನಿ ಮಾತನಾಡಿ, ರೈತರ ಜೀವನದ ವಿಚಾರದಲ್ಲಿ ವಕ್ಫ್ ಮಂಡಳಿ ಮತ್ತು ಸರ್ಕಾರ ಚೆಲ್ಲಾಟವಾಡುತ್ತಿದೆ. ಇದನ್ನು ಇಲ್ಲಿಗೆ ಕೈಬಿಟ್ಟು ಅನ್ನದಾತರ ಕ್ಷಮೆ ಕೇಳಬೇಕು. ಈವರೆಗೆ ರೈತರ ಜಮೀನುಗಳ ಪಹಣಿ ಪತ್ರಿಕೆಯಲ್ಲಿ ವಕ್ಫ್ ಎಂದು ನಮೂದಿಸಿರುವ ಹಾಗೂ ಅನ್ನದಾತರಿಗೆ ನೋಟೀಸ್ ನೀಡಿರುವ ಎಲ್ಲ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರ ಬಾಯಿಗೆ ಮಣ್ಣು ಹಾಕಲು ಸರ್ಕಾರ ಮುಂದಾದರೆ, ಮುಂದಿನ ದಿನಗಳಲ್ಲಿ ರೈತರೇ ರಾಜಕೀಯ ನಾಯಕರ ಜೇವನವನ್ನೇ ಮಣ್ಣು ಮಕ್ಕಿಸುತ್ತಾರೆ. ಶೀಘ್ರವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಪದಾಧಿಕಾರಿಗಳಾದ ದೊಡ್ಡನಗೌಡ ಯರಡೋಣ, ಯಮನೂರಪ್ಪ ನಾಯಕ, ಪಂಪಾಪತಿ ನಾಯಕ, ಹನುಮಂತಪ್ಪ, ಮರಿಸ್ವಾಮಿ, ಶಂಕರ್, ಬಸವರಾಜ, ಶರಣಪ್ಪ, ದುರುಗೇಶ್, ಮಲ್ಲಿಕಾರ್ಜುನ ಸೇರಿ ಇತರರಿದ್ದರು.