ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಕ್ಕೂ ಒಪ್ಪಿಸುವುದು ಬೇಡ, ಲೀಜ್ ಕೊಡೋದು ಬೇಡ. ಅಳಿವಿನಂಚಿನಲ್ಲಿದ್ದ ಕಾರ್ಖಾನೆ ಪುನಶ್ಚೇತನಗೊಳಿಸಿ, ರೈತರ ಆಸ್ತಿಯನ್ನಾಗಿ ಮಾಡಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರೇ ಕಾರ್ಖಾನೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣೆ ಸಭೆಯಲ್ಲಿ ಬಹುತೇಕ ಶೇರುದಾರ ರೈತರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಕ್ಕೂ ಒಪ್ಪಿಸುವುದು ಬೇಡ, ಲೀಜ್ ಕೊಡೋದು ಬೇಡ. ಅಳಿವಿನಂಚಿನಲ್ಲಿದ್ದ ಕಾರ್ಖಾನೆ ಪುನಶ್ಚೇತನಗೊಳಿಸಿ, ರೈತರ ಆಸ್ತಿಯನ್ನಾಗಿ ಮಾಡಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರೇ ಕಾರ್ಖಾನೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣೆ ಸಭೆಯಲ್ಲಿ ಬಹುತೇಕ ಶೇರುದಾರ ರೈತರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಕಷ್ಟಪಟ್ಟು ಕಾರ್ಖಾನೆ ಕಟ್ಟಿದ್ದಿರಿ,ಈ ಕಾರ್ಖಾನೆ ಇಲ್ಲದಿದ್ದಾಗ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯವರ ಕಾಲು ಬಿದ್ದು ಕಬ್ಬು ಕೊಟ್ಟು ಬಂದಿದ್ದೇವೆ. ಈ ಕಾರ್ಖಾನೆ ಆರಂಭವಾದ ಮೇಲೆ ಕಬ್ಬು ಬೆಳೆದ ರೈತರಿಗೆ ರಾಜಮರ್ಯಾದೆ ನೀಡುತ್ತಿದ್ದಾರೆ. ಯಶವಂತರಾಯಗೌಡರು ರೈತರ ಕಬ್ಬಿನ ಬಿಲ್ ಬಾಕಿ ಇಟ್ಟುಕೊಳ್ಳುವುದಿಲ್ಲ ಎಂಬ ವಿಶ್ವಾಸದಿಂದ ಕಾರ್ಖಾನೆಗೆ ಕಬ್ಬು ನೀಡುತ್ತಿದ್ದೇವೆ. ಯಶವಂತರಾಯಗೌಡ ಪಾಟೀಲರು ಕಾರ್ಖಾನೆ ಬಿಟ್ಟರೆ ನಾವ್ಯಾರೂ ಈ ಕಾರ್ಖಾನೆಗೆ ಕಬ್ಬು ಕೊಡೋದಿಲ್ಲ. ಕಾರ್ಖಾನೆ ಉಳಿಯಬೇಕು, ರೈತರು ಉಳಿಯಬೇಕು ಎಂದು ರೈತರು ಹೇಳಿದರು.

ಕಾರ್ಖಾನೆ ಅಧ್ಯಕ್ಷ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2026-27 ನೇ ಸಾಲಿನಲ್ಲಿ 4 ಲಕ್ಷ ಮೆ.ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. 2025-26 ನೇ ಸಾಲಿನಲ್ಲಿ 113 ದಿನದಲ್ಲಿ 4,09,952 ಮೆಟ್ರಿಕ್ ಟನ್ ಕಬ್ಬು ನುರಿಸಿ, 4,10,365 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿ ಶೇ.10.0 ಸಕ್ಕರೆ ಇಳುವರಿ ಪಡೆಯಲಾಗಿದೆ. ಕಾರ್ಖಾನೆ ಕಾರ್ಖಾನೆಯ ಅಳಿವು, ಉಳಿವು ರೈತರ ಮೇಲಿದೆ. ಕಬ್ಬು ಕಾರ್ಖಾನೆಗೆ ಕಳುಹಿಸಿದರೆ ಕಾರ್ಖಾನೆಗೂ ಲಾಭ, ರೈತರಿಗೂ ಲಾಭವಾಗುತ್ತದೆ ಎಂದ ಅವರು, 2025-26 ನೇ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ ₹3868 ಸಂದಾಯ ಮಾಡಲಾಗಿದೆ ಎಂದು ಹೇಳಿದರು.ಅನೇಕ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ರೇವಗೊಂಡಪ್ಪ ಪಾಟೀಲ, ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ವಿಶ್ವನಾಥ ಬಿರಾದಾರ, ಬಸಣ್ಣ ಕೊರೆ, ಸಿದ್ದಣ್ಣ ಬಿರಾದಾರ, ಜಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ಬಸವರಾಜ ಧನಶ್ರೀ, ಅಪ್ಪು ನಡಗೇರಿ, ಸಿದ್ದುಗೌಡ ಪಾಟೀಲ, ವಿಶ್ವನಾಥ ಎಸ್ ಬಿರಾದಾರ, ದುಂಡಪ್ಪ ಖೇಡ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಎಸ್.ಕೆ.ಭಾಗ್ಯಶ್ರೀ ವೇದಿಕೆಯಲ್ಲಿದ್ದರು.

ಕಾರ್ಖಾನೆಯ ಅಧಿಕಾರಿಗಳಾದ ನಾಗಭೂಷಣ, ರವಿಶಂಕರ ಸಂಬಾಣಿ, ಎಂ.ಎ.ಪಾಟೀಲ, ರಾಮ ಚವ್ಹಾಣ, ಅರ್ಜುನ ಎಂ.ಡಿ, ಬಾಬು ಪಡನೂರ, ಪ್ರವೀಣ ಜೇವೂರ, ಗೋವಿಂದ ಗೊಂದಳಿ, ಸಚೀನ ಸೊಂಪೂರ, ಸಾತಲಿಂಗಯ್ಯ ಹಿರೇಮಠ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಖಾನೆಗೆ ಹೆಚ್ಚು ಕಬ್ಬು ಕಳುಹಿಸಿದ ರೈತರಾದ ಶ್ರೀಮಂತ ಇಂಡಿ, ವಿಶ್ವನಾಥ ರೇವತಗಾಂವ ಹಾಗೂ ಹೆಚ್ಚು ಕಬ್ಬು ಸಾಗಾಣಿಕೆ ಮಾಡಿದ ವಾಹನ ಮಾಲೀಕರಾದ ಭೀರಪ್ಪ ಪೂಜಾರಿ, ಮೌಲಾಅಲಿಸಾಬ ಜಾತಗಾರ ಅವರಿಗೆ ಬ್ಯಾಂಕಿನ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.

ರೈತರ ಸಂಪೂರ್ಣ ಬಿಲ್ ಪಾವತಿ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕರೆ ಉದ್ದಿಮೆ ಉಳಿಸಿ ಬೆಳೆಸಲು ಕಾರ್ಖಾನೆಗಳ ನೆರವಿಗೆ ಬರಬೇಕಿದೆ. ಪ್ರಸಕ್ತ ವರ್ಷ ಕಾರ್ಖಾನೆ ₹11.43 ಕೋಟಿ ಲಾಭದಲ್ಲಿದ್ದರೂ ಸಹ ಬ್ಯಾಂಕಿನ ಅಸಲು ಬಡ್ಡಿ ಕಟ್ಟಿದರೆ ₹433 ಕೋಟಿ ಸಾಲದ ಹೊರೆ ಕಾರ್ಖಾನೆ ಮೇಲಿದೆ. ಕಾರ್ಖಾನೆಯಿಂದ ವಿದ್ಯುತ್ ಪಡೆದ ಹೆಸ್ಕಾಂ ನೀಡಿದ ₹10 ಕೋಟಿಯನ್ನು ಸಹ ರೈತರಿಗೆ ಹಂಚಿಕೆ ಮಾಡಲಾಗಿದೆ. ರೈತರ ಸಂಪೂರ್ಣ ಬಿಲ್ ಪಾವತಿ ಮಾಡಿದೆ. ತೂಕದಲ್ಲಿ ರೈತರಿಗೆ ಮೋಸ ಮಾಡಿಲ್ಲ. ಬ್ಯಾಂಕರ್ಸ್ ಬಿಟ್ಟರೆ ಯಾವುದೇ ಋಣಬಾರ ಕಾರ್ಖಾನೆಯ ಮೇಲಿಲ್ಲ ಎಂದು ಯಶವಂತರಾಯಗೌಡ ಪಾಟೀಲ ತಿಳಿಸಿದರು.