ನಕಲಿ ಪತ್ರಕರ್ತರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

| Published : Oct 27 2024, 02:15 AM IST

ಸಾರಾಂಶ

ತಾಲೂಕಿನಾದ್ಯಂತ ನಕಲಿ ಪತ್ರಕರ್ತರ ಹಾಗೂ ಅನಧಿಕೃತ ಯ್ಯೂಟ್ಯೂಬ್ ಚಾನಲ್ ಹಾವಳಿ ಹೆಚ್ಚಾಗಿದ್ದು ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಟ್ಟೀಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಿಎಸ್‌ಐ ರಮೇಶ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ರಟ್ಟೀಹಳ್ಳಿ: ತಾಲೂಕಿನಾದ್ಯಂತ ನಕಲಿ ಪತ್ರಕರ್ತರ ಹಾಗೂ ಅನಧಿಕೃತ ಯ್ಯೂಟ್ಯೂಬ್ ಚಾನಲ್ ಹಾವಳಿ ಹೆಚ್ಚಾಗಿದ್ದು ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಟ್ಟೀಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಿಎಸ್‌ಐ ರಮೇಶ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಮಾಣೆ ಮಾತನಾಡಿ, ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ನೈಜ ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದೇ ದುಸ್ತರವಾಗಿದೆ. ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ನಾನು ಪತ್ರಕರ್ತನೆಂದು ಹಣ ಸುಲಿಗೆ ಮಾಡುತ್ತಿದ್ದು, ಈ ಬಗ್ಗೆ ಅನೇಕ ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ದೂರು ನೀಡಿದ್ದು ಅಂತವರನ್ನು ಗುರುತಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಂಥವರನ್ನು ಗುರುತಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಿ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಅವರು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗುವುದು ಕಟ್ಟಿಟ್ಟ ಬುತ್ತಿ ಎಂದರು.

ಶಿವಕುಮಾರ ನಾಯಕ ಮಾತನಾಡಿ, ಅನುಮಾನಾಸ್ಪದ ನಕಲಿ ಪತ್ರಕರ್ತರು ಅಧಿಕಾರಿಗಳ ಹಾಗೂ ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣ ಪೂಲೀಸ್ ಇಲಾಖೆಗೆ ಮಾಹಿತಿ ನೀಡಿ ಇಲ್ಲವಾದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಲಿ ಸದಸ್ಯರಿಗೆ ಮಾಹಿತಿ ನೀಡಿದರೆ ಅಂತವರನ್ನು ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ನಕಲಿ ಪತ್ರಕರ್ತರ ಹಾವಳಿಯಿಂದಾಗಿ ನೈಜ ಪತ್ರಕರ್ತರನ್ನು ಸಮಾಜದಲ್ಲಿ ಕಳ್ಳರಂತೆ ನೋಡುವಂತಾಗಿದ್ದು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲು ಸಾಕಷ್ಟು ತೊಂದರೆಯಾಗುತ್ತಿದೆ. ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಕಳೆದ 15-20 ವರ್ಷಗಳಿಂದ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕೃತ ವರದಿಗಾರರ ಬಗ್ಗೆ ಹಾವೇರಿಯ ವಾರ್ತಾ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿಯಿದ್ದು ಅನಧಿಕೃತ ಲೋಗೋ ಹಿಡಿದು ಹಾಗೂ ತಮ್ಮ ಬೈಕ್, ಕಾರ್‌ಗಳ ಮೇಲೆ ಪ್ರೆಸ್ ಅಂತ ಬೋರ್ಡ್‌ ಹಾಕಿದವರನ್ನು ಗುರುತಿಸಿ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಸತೀಶ ಸರಶೆಟ್ಟರ್, ಪ್ರದೀಪ ಕುಲಕರ್ಣಿ, ಕರಿಯಪ್ಪ ಚೌಡಕ್ಕಳವರ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ರಮೇಶ, ತಾಲೂಕಿನಲ್ಲಿ ನಕಲಿ ಪತ್ರಕರ್ತರು ಹಾಗೂ ಯಾವುದೇ ಪರವಾನಗಿ ಇಲ್ಲದೆ ಅನಧಿಕೃತ ಲೋಗೋ ಹೊಂದಿದ ಯ್ಯೂಟ್ಯೂಬನವರ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು ಅಂಥವರನ್ನು ಈಗಾಗಲೇ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಅವರನ್ನು ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಿ ಬಂಧಿಸಲಾಗುವುದು ಎಂದರು.