ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ಪ್ರವರ್ಗ- 2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾ ಶಾಖೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಒಕ್ಕೂಟದ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ಪಂಚಮಸಾಲಿ ಸಮುದಾಯದ ಬೇಡಿಕೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಒತ್ತಾಯಕ್ಕೆ ಮಣಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎಚ್.ನಾಗರಾಜು ಮಾತನಾಡಿ, ಪಂಚಮಸಾಲಿ ಲಿಂಗಾಯತರು 3ಬಿ ವರ್ಗದಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ.15ರ ಮೀಸಲಾತಿಯ ಲಾಭ ಪಡೆಯಲು 2ಎ ಪ್ರವರ್ಗದಡಿ ಮೀಸಲಾತಿ ನೀಡುವಂತೆ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರದ ಮೇಲೆ ಒತ್ತಡ ಹೇರಿದರೆ ಯಾವುದೇ ಕಾರಣಕ್ಕೂ ಪಂಚಮಸಾಲಿಗಳನ್ನು 2 ಎ ಪ್ರವರ್ಗಕ್ಕೆ ಸೇರಿಸುವ ತಪ್ಪು ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು. ಒಂದು ವೇಳೆ 2ಎಗೆ ಸೇರಿಸಿದರೆ ರಾಜ್ಯವಾರು ಹಿಂದುಳಿದ ಜಾತಿಗಳ ಎಲ್ಲಾ ವರ್ಗಗಳು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಕಾಂಗ್ರೆಸ್ ಪಕ್ಷಕ್ಕೆ ಶೇ.90ರಷ್ಟು ಹಿಂದುಳಿದ ಜಾತಿಗಳು ಮತ ಚಲಾಯಿಸಿ 139 ಶಾಸಕರು ಗೆಲ್ಲಲು ಕಾರಣಿಭೂತರಾಗಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದರು.
ಡಿ.ದೇವರಾಜು ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ ಮಾತನಾಡಿ, ಹಿಂದುಳಿದ ವರ್ಗಗಳಲ್ಲಿ 200 ಜಾತಿಗಳಿದ್ದು ಹಿಂದುಳಿದ ಪ್ರವರ್ಗ- 2ಎನಲ್ಲಿ 102 ಜಾತಿಗಳು ಮೀಸಲಾತಿ ಪಡೆಯುತ್ತಿವೆ. ಈಗ ಇರುವ ಜನಗಳಿಗೆ ಮೀಸಲಾತಿ ಸಿಗದೇ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ ಎಂದು ಪಂಚಮಸಾಲಿಗಳು 2ಎ ಪ್ರವರ್ಗಕ್ಕೆ ಸೇರಿಸಿ ಎಂದು ಹೋರಾಟ ಮಾಡುತ್ತಿರುವುದನ್ನು ಖಂಡಿಸಿದರು.ಹಿಂದುಳಿದ ಜಾತಿಗಳು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಿದ್ದರೂ ಬಿಜೆಪಿ ಪಕ್ಷದವರು ಮಾತನಾಡದೆ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡದ ಬಿಜೆಪಿ ಪಂಚಮಸಾಲಿಗಳಿಗೆ ಹಿಂದುಳಿದ ಪ್ರವರ್ಗ-2ಎಗೆ ಸೇರಿಸಲು ಹೋರಾಟ ಮಾಡುತ್ತಿರುವುದು ರಾಜಕೀಯ ಡ್ರಾಮಾ. ಹಿಂದುಳಿದ ವರ್ಗಗಳು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿ 66 ಸ್ಥಾನ ಬಂದಿದೆ. ಇದೇ ರೀತಿ ಮುಂದುವರೆದರೆ 33 ಸ್ಥಾನ ಬರುತ್ತವೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಾತನೂರು ಕೃಷ್ಣ, ಎನ್. ದೊಡ್ಡಯ್ಯ, ರಮೇಶ್, ಎಂ.ಎಸ್, ರಾಜಣ್ಣ, ಸತೀಶ್, ಶಿವರುದ್ರ, ಪುಟ್ಟಬಸವಯ್ಯ, ನಾಗರತ್ನ, ಶಕುಂತಲಾ, ರಮೇಶ್ ಬಾಬು, ಪುಟ್ಟಸ್ವಾಮಿ ಹಲವರು ಭಾಗವಹಿಸಿದ್ದರು.