ಸಾರಾಂಶ
ಕಟ್ಟಡ ಕಾರ್ಮಿಕರ ಕಾರ್ಡ್ ಪುನರ್ ಪರಿಶೀಲನಾ ಅವಧಿ ವಿಸ್ತರಿಸುವುದು, ಹಾನಗಲ್ ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಗೌಂಡಿ ಸಂಘದ ಕಚೇರಿಗೆ ಸ್ಥಳಾವಕಾಶ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕಟ್ಟಡ ಕಾರ್ಮಿಕರು ಮತ್ತು ಗೌಂಡಿ ಸಂಘದ ಪದಾಧಿಕಾರಿಗಳಿಂದ ಶಾಸಕ ಶ್ರೀನಿವಾಸ ಮಾನೆಗೆ ಮನವಿ
ಕನ್ನಡಪ್ರಭ ವಾರ್ತೆ ಹಾನಗಲ್ಲ ಕಟ್ಟಡ ಕಾರ್ಮಿಕರ ಕಾರ್ಡ್ ಪುನರ್ ಪರಿಶೀಲನಾ ಅವಧಿ ವಿಸ್ತರಿಸುವುದು, ಹಾನಗಲ್ ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಗೌಂಡಿ ಸಂಘದ ಕಚೇರಿಗೆ ಸ್ಥಳಾವಕಾಶ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಮತ್ತು ಗೌಂಡಿ ಸಂಘದ ಪದಾಧಿಕಾರಿಗಳು ಶಾಸಕ ಶ್ರೀನಿವಾಸ ಮಾನೆಗೆ ಮನವಿ ಸಲ್ಲಿಸಿದರು.ಕಾರ್ಮಿಕರ ಹೆಸರಿನಲ್ಲಿ ನಕಲಿ ಕಾರ್ಡ್‌ಗಳನ್ನು ಮಾಡಿಸಿಕೊಂಡಿರುವವರ ಸಂಖ್ಯೆ ಹೆಚ್ಚಿರುವುದರಿಂದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾರ್ಡ್‌ಗಳ ಪರಿಶೀಲನೆ ನಡೆಸಿದ್ದಾರೆ. ಪುನರ್ ಪರಿಶೀಲನೆಯ ಸಂದರ್ಭ ಕೆಲವು ಅರ್ಹರ ಕಾರ್ಡುಗಳೂ ಸಹ ರದ್ದಾಗಿವೆ. ಅರ್ಹ ಫಲಾನುಭವಿಗಳಿಗೆ ಕಾರ್ಡ್ ಸೌಲಭ್ಯ ದೊರಕಿಸಬೇಕು. ಕಾರ್ಡ್‌ನ ಪುನರ್ ಪರಿಶೀಲನಾ ಅವಧಿ ವಿಸ್ತರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಶಾಸಕ ಶ್ರೀನಿವಾಸ ಮಾನೆ, ತಾಲೂಕಿನಲ್ಲಿ ಅರ್ಹರಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಅನರ್ಹರೇ ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡಿದ್ದಾರೆ. ತಾಲೂಕುವೊಂದರಲ್ಲಿಯೇ ೪೦ ಸಾವಿರ ಕಾರ್ಮಿಕರ ಕಾರ್ಡ್‌ಗಳಿವೆ. ಇದರಿಂದಾಗಿ ಅರ್ಹರೂ ಕೂಡ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಅಲ್ಲದೇ ನಿಜವಾದ ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನ ಕಡಿತ ಅನಿವಾರ್ಯವಾಗಿದೆ. ಹೀಗಾಗಿ ಸರ್ಕಾರ ನಿಜವಾದ ಕಾರ್ಮಿಕರಿಗೆ ಕಾರ್ಡ್ ವಿತರಿಸಲು ಮುಂದಾಗಿದ್ದು, ಅನರ್ಹರ ಕಾರ್ಡ್ ರದ್ದು ಪಡಿಸಲಾಗುತ್ತಿದೆ ಎಂದ ಅವರು, ಯಾವುದೇ ಕಾರಣಕ್ಕೂ ಅರ್ಹರು ಕಾರ್ಮಿಕ ಇಲಾಖೆಯ ಸೌಲಭ್ಯಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕಾಳಜಿ ವಹಿಸಲಾಗುವುದು. ಪುನರ್ ಪರಿಶೀಲನಾ ಅವಧಿ ವಿಸ್ತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಸಂಘದ ಕಚೇರಿಗೆ ಸ್ಥಳಾವಕಾಶ ಕಲ್ಪಿಸುವಂತೆ ಸ್ಥಳೀಯ ಪುರಸಭೆಯ ಗಮನ ಸೆಳೆಯುವ ಭರವಸೆ ನೀಡಿದರು.
ಕಟ್ಟಡ ಕಾರ್ಮಿಕರು ಮತ್ತು ಗೌಂಡಿ ಸಂಘದ ತಾಲೂಕಾಧ್ಯಕ್ಷ ನಾಗೇಂದ್ರ ಚಿಕ್ಕಣ್ಣನವರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.