ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಗುತ್ತಿಗೆ, ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಗುತ್ತಿಗೆ, ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.ಈ ವೇಳೆ ನೌಕರರ ಒಕ್ಕೂಟದ ಪದಾಧಿಕಾರಿ ಚಂದ್ರಶೇಖರ ಲೆಂಡಿ ಮಾತನಾಡಿ, ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ನೌಕರರಿಗೆ ಸೇವಾ ಭದ್ರತೆ ಒದಗಿಸುವುದು, ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ, ಜೇಷ್ಠತೆ ಆಧಾರದ ಮೇಲೆ ಪದೋನ್ನತಿ ನೀಡಲು ಕ್ರಮಕೈಗೊಳ್ಳುವುದು, ಶಿಕ್ಷಕರ ಹುದ್ದೆ ಭರ್ತಿ, ವರ್ಗಾವಣೆ, ಸೇವಾ ಜೇಷ್ಠತೆ, ಸಿ ಮತ್ತು ಆರ್ ಪರಿಷ್ಕರಣೆ ಸಮಸ್ಯೆಗಳನ್ನು ಬಗೆಹರಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವುದು. ಆಡಳಿತ ಸುಧಾರಣೆ ಆಯೋಗ-೨ರ ನೌಕರ ವಿರೋಧಿ ಶಿಫಾರಸುಗಳನ್ನು ಹಿಂಪಡೆಯಬೇಕು. ಲಾಕ್‌ಡೌನ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಗೌರವ ಸಲಹೆಗಾರ ಸುರೇಶ ಜೀಬಿ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳು ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಸಹಕಾರಿಯಾಗಿವೆ. ದೇಶದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿರುವ ಎನ್‌ಪಿಎಸ್ ಪದ್ದತಿಗೆ ಜಾರಿಗೊಳಿಸಲು ತೀರ್ಮಾನಿಸಿದೆ. ಆದರೆ, ಯುಪಿಎಸ್ ಪದ್ಧತಿ ಸಹ ಎನ್‌ಪಿಎಸ್‌ನಂತೆಯೇ ಕರಾಳ ಅಂಶಗಳನ್ನು ಹೊಂದಿದೆ. ಈ ಯೋಜನೆಯು ನೌಕರರು ಮತ್ತು ಶಿಕ್ಷಕರನ್ನು ವಂಚಿಸುವ ಪ್ರಯತ್ನ ಎಂದು ದೂರಿದರು.ಈ ಸಂದರ್ಭದಲ್ಲಿ ವಿಜಯಕುಮಾರ ಹುಲಗಿಮನಿ, ಈರಣ್ಣ ಹೊಸಟ್ಟಿ, ಎ.ವೈ.ಮಾಶ್ಯಾಳ, ಎಸ್.ಐ. ಬಿರಾದಾರ, ಎಂ.ಸಿ. ಬಿರಾದಾರ, ಜಿ.ಬಿ.ಗುಣದಾಳ, ಶ್ರೀಧರ ಪಾರಶಟ್ಟಿ, ಜೆ.ಬಿ.ಬಿರಾದಾರ, ಎ.ಎ.ಅಕ್ಕಿ, ಬಸವರಾಜ ದಂಡಾವತಿ, ಸಚಿದ ಮುಲ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.ಕೋಟ್
ರಾಜ್ಯದ ೭ ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ೭.೭೩ ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ ೫.೨೦ ಲಕ್ಷ ಮಾತ್ರ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು ೨.೮೦ ಲಕ್ಷದಷ್ಟಿವೆ. ಅತಿ ಕಡಿಮೆ ವೇತನ ನೀಡುವ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ನೌಕರರನ್ನು ನೇಮಿಸಿಕೊಂಡು ಸರ್ಕಾರವೇ ರಾಜ್ಯದ ಯುವಕರನ್ನು ಶೋಷಿಸುತ್ತಿರುವುದು ಘೋರ ಅನ್ಯಾಯವಾಗಿದೆ.- ದಾಕ್ಷಾಯಿಣಿ ಹುಡೇದ, ನೌಕರರ ಸಂಘದ ಪ್ರ. ಕಾರ್ಯದರ್ಶಿ