ಪುಂಡರ ಸೆರೆಗೆ ದಾವಣಗೆರೆಯಲ್ಲಿ ಕೆಎಸ್ಸಾರ್ಟಿಸಿ ನೌಕರರ ಆಗ್ರಹ

| Published : Feb 28 2025, 12:49 AM IST

ಸಾರಾಂಶ

ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಹಾಗೂ ಪೋಕ್ಸೋ ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟ್ಯಾಫ್ ಅಂಡ್ ವರ್ಕರ್ಸ್ ಯೂನಿಯನ್ ಎಐಟಿಯುಸಿ ಜಿಲ್ಲಾ ಘಟಕ ನಗರದಲ್ಲಿ ಗುರುವಾರ ಪ್ರತಿಭಟಿಸಿತು.

ನಿರ್ವಾಹಕನ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ । ಕ್ರಮಕ್ಕೆ ಸಿಎಂಗೆ ಮನವಿ । ಪೋಕ್ಸೋ ದಾಲಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಹಾಗೂ ಪೋಕ್ಸೋ ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಸ್ಟ್ಯಾಫ್ ಅಂಡ್ ವರ್ಕರ್ಸ್ ಯೂನಿಯನ್ ಎಐಟಿಯುಸಿ ಜಿಲ್ಲಾ ಘಟಕ ನಗರದಲ್ಲಿ ಗುರುವಾರ ಪ್ರತಿಭಟಿಸಿತು.

ನಗರದ ತಾಲೂಕು ಕಚೇರಿ ಎದುರು ಸಂಘಟನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮರಾಠಿ ಪುಂಡರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ನೌಕರರು ನಂತರ ತಹಸೀಲ್ದಾರ್ ಕಚೇರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಎಚ್‌.ಜಿ.ಉಮೇಶ, ಬೆಳಗಾವಿಯಿಂದ ಸುಳೆಬಾವಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಫೆ.21ರಂದು ಕರ್ತವ್ಯ ನಿರತ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಮರಾಠಿ ಭಾಷಿಕ ಯುವಕರು ಮನಸೋಇಚ್ಛೆ ದಾಳಿ ಮಾಡಿ, ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಾಠ ಭಾಷಾಂಧರ ಇಂತಹ ಕುಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೆಎಸ್ಸಾರ್ಟಿಸಿ ನಿರ್ವಾಹಕ ಮಹದೇವ ಹುಕ್ಕೇರಿ ಜೊತೆಗೆ ವಾಗ್ವಾದ ಮಾಡಿ, ಪಂಥ ಬಾಳೇಕುಂದ್ರಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವಾಗ ಮರಾಠಿ ಭಾಷಿಗ ಪುಂಡ ಮೊಬೈಲ್ ಕರೆ ಮಾಡಿ, ಸುಮಾರು 15 ಜನ ತನ್ನ ಸ್ನೇಹಿತರನ್ನು ಗುಂಪಾಗಿ ಕರೆಸಿಕೊಂಡು, ಅದೇ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಪೋಕ್ಸೋ ಕೇಸ್ ದಾಖಲಿಸಿದ್ದು ಹೀನ ಕೃತ್ಯವಾಗಿದೆ ಎಂದು ದೂರಿದರು.

ಪೋಕ್ಸೋ ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಗಳ ನಡೆಯೂ ಖಂಡನೀಯವಾಗಿದೆ. ಮರಾಠ ಪುಂಡರನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳು ಅದೇ ಕೆಎಸ್ಸಾರ್ಟಿಸಿ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆಯೇ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ. ಇಂತಹದ್ದನ್ನು ತಮ್ಮ ಸಂಘಟನೆಯಾಗಲೀ, ಸಮಸ್ತ ಕನ್ನಡಿಗರಾಗಲೀ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಮಹದೇವ ಹುಕ್ಕೇರಿಗೆ ಅವಾಚ್ಯವಾಗಿ ನಿಂದಿಸಿರುವ ಮರಾಠಿ ಪುಂಡರ ಪಟಾಲಂನ್ನು ಬಂಧಿಸಿ, ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೋಕ್ಸೋ ಪ್ರಕರಣ ದಾಖಲಿಸಿರುವ ಅಲ್ಲಿನ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಆಗಬೇಕು. ಈ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕೆಎಸ್ಸಾರ್ಟಿಸಿ ನೌಕರರು, ಕಾರ್ಮಿಕರಿಗೆ ಕಾನೂನು ರೀತಿ ಸೂಕ್ತ ಬಂದೋಬಸ್ತ್, ಭದ್ರತೆ, ರಕ್ಷಣೆ ಒದಗಿಸಬೇಕು. ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಆಗಾಗ ಇಂತಹ ಅಂಧ ಪರಭಾಷಿಗ ಪುಂಡರ ಹಾವಳಿಯನ್ನು ಮಟ್ಟ ಹಾಕಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮ ಜರುಗಿಸಿ, ಕೆಎಸ್ಸಾರ್ಟಿಸಿ ನೌಕರರು, ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿರು.

ಸಂಘಟನೆ ಮುಖಂಡರಾದ ಪ್ರಕಾಶ, ಸುರೇಶ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಕೆಎಸ್ಸಾರ್ಟಿಸಿ ಚಾಲಕರು, ನಿರ್ವಾಹಕರು, ಕಾರ್ಮಿಕರು ಇದ್ದರು.