ಸರಕು ಲಾರಿ ಓಡಾಟ ಅನುಮತಿಗೆ ಆಗ್ರಹಿಸಿ ಡಿಸಿ ಕಚೇರಿ ಚಲೋ

| Published : Jul 19 2025, 01:00 AM IST

ಸಾರಾಂಶ

ಕೊಡಗಿನಲ್ಲಿ ಟಿಂಬರ್ ಸಾಗಾಟ, ಸರಕು ಲಾರಿಗಳ ಓಡಾಟಕ್ಕೆ ಅನುಮತಿ ನೀಡಲು ಆಗ್ರಹಿಸಿ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಟಿಂಬರ್ ಮರ್ಚೆಂಟ್ ಮತ್ತು ಕಾರ್ಮಿಕರ ಸಂಘದ ವತಿಯಿಂದ ಡಿಸಿ ಕಚೇರಿ ಚಲೋ ಪ್ರತಿಭಟನೆ ನಡೆಯಿತು.

ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಟಿಂಬರ್ ಮರ್ಚೆಂಟ್ ಮತ್ತು ಕಾರ್ಮಿಕರ ಸಂಘದಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಟಿಂಬರ್ ಸಾಗಾಟ, ಸರಕು ಲಾರಿಗಳ ಓಡಾಟಕ್ಕೆ ಅನುಮತಿ ನೀಡಲು ಆಗ್ರಹಿಸಿ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಟಿಂಬರ್ ಮರ್ಚೆಂಟ್ ಮತ್ತು ಕಾರ್ಮಿಕರ ಸಂಘದ ವತಿಯಿಂದ ಡಿಸಿ ಕಚೇರಿ ಚಲೋ ಪ್ರತಿಭಟನೆ ನಡೆಯಿತು.ನಗರದ ಗಾಂಧಿಮೈದಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಈ ಸಂದರ್ಭ ಮಾತನಾಡಿದ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಸರಕು ಸಾಗಾಣೆ ಮಾಡುವ (೧೮.೫೦೦ ಕೆ.ಜಿ. ಗಿಂತ ಹೆಚ್ಚಿನ ತೂಕ) ವಾಹನಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಪರಿಣಾಮ ಜಿಲ್ಲೆಯ ಕೂಲಿ ಕಾರ್ಮಿಕರು ಹಾಗೂ ವಾಹನ ಚಾಲಕರು ನಿರುದ್ಯೋಗಿಗಳಾಗಿದ್ದಾರೆ. ವಾಹನ ಮಾಲೀಕರು ವಾಹನಗಳಿಗೆ ಮಾಡಿರುವ ಸಾಲವನ್ನು ಪಾವತಿಸಲು ಪರದಾಡುವಂತಾಗಿದೆ. ಜಿಲ್ಲೆಯ ಲಾರಿಗಳು ಬಂದರುಗಳಿಗೆ ಟಿಂಬರ್ ಮತ್ತು ಕಾಫಿಯನ್ನು ಸಾಗಾಟ ಮಾಡುವ ವಾಹನಗಳಾಗಿದೆ. ಈ ಸಂಚಾರ ನಿಷೇಧ ಕೊಡಗಿನ ಕಾಫಿ ಬೆಳೆಯುವ ರೈತರ ಪಾಲಿಗೆ ಕೂಡ ಆಘಾತಕಾರಿಯಾಗಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆ ೧೦, ೧೨, ೧೪ ಚಕ್ರ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಟಿಂಬರ್ ಮರ್ಚೆಂಟ್ ಸಂಘಟನೆಯ ಅಧ್ಯಕ್ಷ ಶಮೀರ್ ಮಾತನಾಡಿ, ಜಿಲ್ಲಾಡಳಿತದ ಆದೇಶ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಇದೇ ಭಾರದ ವಾಹನಗಳಲ್ಲಿ ಹೊರ ಜಿಲ್ಲೆಯ ವಾಹನಗಳಲ್ಲಿ ಜೆಲ್ಲಿ ಲೋಡ್ ಮಾಡಿ ಸಾಗಿಸುತ್ತಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಎಂಬಂತಾಗಿದೆ. ಜಿಲ್ಲೆಯ ರಸ್ತೆಗಳಲ್ಲಿ ೧೮೫೦೦ ಕೆ.ಜಿ ಗಿಂತ ಹೆಚ್ಚಿನ ತೂಕವಿರುವ ವಾಹನಗಳು ಸಂಚಾರ ಮಾಡಿದರೆ ರಸ್ತೆ ಹಾಳಾಗುತ್ತದೆ ಎಂದು ಹೇಳುತ್ತಾರೆ. ರಸ್ತೆಗಳ ಗುಣಮಟ್ಟ ಕಾಪಾಡುವುದು ಯಾರ ಹೊಣೆ ಎಂದು ಪ್ರಶ್ನಿಸಿದ ಅವರು, ಗುಣಮಟ್ಟದ ರಸ್ತೆಗಳನ್ನು ಮಾಡಿದರೆ ಯಾವುದೇ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಅದನ್ನು ಮೊದಲು ಮಾಡಿ ಎಂದರು.ಪತ್ರಿಭಟನಾನಿರತರು ಇದೇ ಸಂದರ್ಭ ಟಿಂಬರ್ ವಾಹನ ಸಂಚಾರಕ್ಕೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ಮನವಿ ಸಲ್ಲಿಸಿದರು.ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಅಝೀಜ್, ಖಜಾಂಚಿ ಹುರೈದ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜು ಸುಬ್ರಮಣಿ, ಕಾರ್ಮಿಕ ಸಂಘಟನೆ ಅಧ್ಯಕ್ಷ ಎನ್.ಡಿ.ಕುಟ್ಟಪ್ಪ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಲಾರಿ ಚಾಲಕರು, ಮಾಲೀಕರು, ಕಾರ್ಮಿಕರು, ಟಿಂಬರ್ ಮರ್ಚೆಂಟ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.