ವಿಧಾನಪರಿಷತ್ತಿನಲ್ಲಿ ಗ್ರಾಪಂ ಒಕ್ಕೂಟದ ಬೇಡಿಕೆ ಪ್ರಸ್ತಾಪ: ಸತೀಶ್ ಭರವಸೆ

| Published : Oct 10 2024, 02:23 AM IST

ವಿಧಾನಪರಿಷತ್ತಿನಲ್ಲಿ ಗ್ರಾಪಂ ಒಕ್ಕೂಟದ ಬೇಡಿಕೆ ಪ್ರಸ್ತಾಪ: ಸತೀಶ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಅಧಿವೇಶನದಲ್ಲಿ ಒಕ್ಕೂಟದ ಬೇಡಿಕೆಗಳ ಕುರಿತಾಗಿ ಪ್ರಸ್ತಾಪ ಮಾಡಲಾಗುವುದು.

ಬಳ್ಳಾರಿ: ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಗೌರವಧನ ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಪಿಡಿಒಗಳು, ಗ್ರಾಪಂ ನೌಕರರು ಬೇಡಿಕೆಗಳ ಈಡೇರಿಕೆಗೆ ವಿಧಾನಪರಿಷತ್ತಿನಲ್ಲಿ ವಿಷಯವನ್ನು ಪ್ರಸ್ತಾಪ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಭರವಸೆ ನೀಡಿದರು.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ವತಿಯಿಂದ ನಗರ ಜಿಲ್ಲಾ ಪಂಚಾಯತಿ ಕಚೇರಿಯ ಮುಂಭಾಗ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮನವಿ ಸ್ವೀಕರಿಸಿದ ವೈ.ಎಂ. ಸತೀಶ್ ಅವರು, ಮುಂದಿನ ಅಧಿವೇಶನದಲ್ಲಿ ಒಕ್ಕೂಟದ ಬೇಡಿಕೆಗಳ ಕುರಿತಾಗಿ ಪ್ರಸ್ತಾಪ ಮಾಡಲಾಗುವುದು. ಒಕ್ಕೂಟದ ಎಲ್ಲ ಬೇಡಿಕೆಗಳನ್ನು ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಬಾಣಾಪುರದ ನಾಗರಾಜಗೌಡ ಅವರು ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಪಿಡಿಒಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೈ.ಎಂ.ಸತೀಶ್, ಒಕ್ಕೂಟದಿಂದ ನ್ಯಾಯಯುತ ಬೇಡಿಕೆಗಳ ಆಧಾರದಲ್ಲಿ ಹೋರಾಟ ನಡೆದಿದೆ. ನಿಮ್ಮ ಹೋರಾಟವನ್ನು ಸರ್ಕಾರ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಧ್ವನಿ ಎತ್ತುವೆ ಎಂದರು. ಒಕ್ಕೂಟದ ಪ್ರಮುಖರಾದ ವೆಂಕಟಮ್ಮ, ಮಂಜುಳಾ, ಎಂ. ಹುಸೇನ್, ಎಂ. ಶಾಷಾವಲಿ, ದಾದಾಸಾಹೇಬ್, ರಾಜಶೇಖರಗೌಡ, ಕುಮಾರ, ಎಂ. ಮರಿಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.

ಬಳ್ಳಾರಿ ಜಿಪಂ ಎದುರು ಪ್ರತಿಭಟನೆ ನಡೆಸುತ್ತಿರುವ ಪಿಡಿಒಗಳು, ಗ್ರಾಪಂ ನೌಕರರು-ಸದಸ್ಯರು ಮತ್ತು ಸಿಬ್ಬಂದಿಯ ಬೇಡಿಕೆಗಳ ಈಡೇರಿಕೆಗೆ ವಿಧಾನಪರಿಷತ್ತಿನಲ್ಲಿ ಧ್ವನಿ ಎತ್ತುವುದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಭರವಸೆ ನೀಡಿದರು.