ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಕಳೆದ ವರ್ಷ ಮಳೆ ಕೊರತೆಯಿಂದ ಜನರು ಬೀಕರ ಬರಗಾಲಕ್ಕೆ ತುತ್ತಾಗಿದ್ದು ರೈತರಿಗೆ ಕೂಡಲೇ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಹಾಯಕ ಆಯುಕ್ತ ಶಿಂಧೆ ಅವಿನಾಶ ಸಂಜೀವಗೆ ಮನವಿ ಸಲ್ಲಿಸಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸುತ್ತ ಕಾಲಹರಣ ಮಾಡುವುದು ಸರಿಯಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಸರ್ಕಾರಕ್ಕೆ ಚೀಮಾರಿ ಹಾಕಿದೆ. ನ್ಯಾಯಾಲಯದ ಮಧ್ಯ ಪ್ರವೇಶದ ಬಳಿಕ ಕೇಂದ್ರ ಸರ್ಕಾರ ₹3,400 ಕೋಟಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಬೇಕು ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.
ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ಆರಂಭಿಸಿದ್ದು ಕಳಪೆ ರಸಗೊಬ್ಬರ, ಬಿತ್ತನೆ ಬೀಜಗಳು ಪೂರೈಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಕ್ರಿಮಿನಾಶಕ, ರಸಗೊಬ್ಬರ, ಬೀಜಗಳ ಮಾರಾಟ ಮಾಡುವ ಅಂಗಡಿಕಾರರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಮುದಗಲ್‌ನಲ್ಲಿ ಹಣ ವಸೂಲಿ: ತಾಲೂಕಿನ ಮುದಗಲ್ ಉಪ ತಹಸೀಲ್ದಾರ್ ಕಚೇರಿಯಲ್ಲಿ ಸರ್ಕಾರದ ಸೌಲತ್ತು ಹಾಗೂ ಪಹಣಿ ನೀಡಲು, ಜಮೀನು ಸರ್ವೇಗೆ ಅರ್ಜಿ ಹಾಕಲು ಇತರೆ ಆನ್ಲೈನ್ ಸೇವೆಗಳ ಒದಗಿಸಲು ಕಚೇರಿಯ ಸಿಬ್ಬಂದಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಈಗಾಗಲೆ ರೈತರ ಜಮೀನು ವರ್ಗಾವಣೆ, ತಿದ್ದುಪಡಿಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ರೈತರ ಜಮೀನು ವರ್ಗಾವಣೆ ತಿದ್ದುಪಡಿ ಮಾಡುವಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಬಸನಗೌಡ, ಕುಪ್ಪಣ ಮಾಣಿಕ್, ಗುಡಗುಂಟಿ ರಾಮಣ್ಣ, ಸಂಗನಗೌಡ, ಲಕ್ಷ್ಮಣ, ಬಸವರಾಜ ಅಂಗಡಿ, ಹನುಮತ ಅಂಗಡಿ, ವೀರನಗೌಡ ಗೌಡೂರು ಸೇರಿದಂತೆ ಇತರರಿದ್ದರು.