ಸಾರಾಂಶ
ವಿಠಲಾಪುರದಿಂದ ಗಂಗಾವತಿವರೆಗೆ ಕಾಲ್ನಡಿಗೆ ಜಾಥಾ
ಕನ್ನಡಪ್ರಭ ವಾರ್ತೆ ಗಂಗಾವತಿದಲಿತ ಯುವತಿಗೆ ವಿಷ ಹಾಕಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಠಲಾಪುರ ಗ್ರಾಮದಿಂದ ಗಂಗಾವತಿವರೆಗೆ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ವಿಠಲಾಪುರ ಗ್ರಾಮದಿಂದ ಪ್ರಾರಂಭಗೊಂಡ ಜಾಥಾ ಗಡ್ಡಿ, ಬಂಡ್ರಾಳ, ವೆಂಕಟಗಿರಿ, ದಾಸನಾಳ, ಬಸಾಪಟ್ಟಣ, ವಡ್ಡರಹಟ್ಟಿ, ಮಾರ್ಗವಾಗಿ ಗಂಗಾವತಿ ತಲುಪಿತು.ಪೊಲೀಸ್ ಠಾಣೆ ಮುಂಭಾಗ ಬಹಿರಂಗ ಸಭೆಯಲ್ಲಿ ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ, ಹಿಂದೆಯು ಸಹ ಇಡೀ ರಾಜ್ಯಾದ್ಯಂತ ವಿವಿಧ ಕಡೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಆ ಸಂದರ್ಭ ಪೊಲೀಸ್ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿದ್ದರು. ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕಾಗಿಯೇ ಈಗಲೂ ಸಹ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಠಲಾಪುರ ಗ್ರಾಮದಲ್ಲಿ ನಡೆದ ಯುವತಿಯ ಕೊಲೆ ಹೇಯ ಕೃತ್ಯವಾಗಿದೆ. ಕೊಲೆ ಮಾಡಿದ ಅರೋಪಿಗಳಿಗೆ ಶಿಕ್ಷೆ ನೀಡಬೇಕು. ಜೊತೆಗೆ ಸರ್ಕಾರ ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಹೋರಾಟಗಾರ ಅಲ್ಲಮಪ್ರಭು ಬೆಟ್ಟ ದೂರು ಮಾತನಾಡಿ ಈ ರೀತಿಯ ಘಟನೆ ಗಳು ಸಂಭವಿಸಿದಾಗ ಜಿಲ್ಲಾಮಟ್ಟದ ಅಧಿಕಾರಿಗಳು ಆ ಗ್ರಾಮಕ್ಕೆ ತೆರಳಿ ಕೂಲಂಕಶವಾಗಿ ಪರಿಶೀಲನೆ ನಡೆಸಬೇಕು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಜರುಗಿಸಬೇಕು. ಮತ್ತೊಮ್ಮೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭ ಹೋರಾಟಗಾರರಾದ ಎಚ್.ಎನ್. ಬಡಿಗೇರ್, ಡಿ.ಎಚ್. ಪೂಜಾರ್, ಹಂಪೇಶ್ ಹರಗೋಲಿ, ಹುಸೇನಪ್ಪ ಹಂಚಿನಾಳ ವಕೀಲರು, ಮರಿಸ್ವಾಮಿ ಬರಗೂರು, ಗಂಗಣ್ಣ ಸಿದ್ದಾಪುರ, ನಜೀರ್ ಮೂಲಿಮನಿ, ಮುತ್ತು ಹಾಲಕೇರಿ ಸೇರಿದಂತೆ ಇತರರಿದ್ದರು.