ಸರ್ಕಾರವು ತೈಲ ಬೆಲೆ ಏರಿಕೆ ಕೈಬಿಡುವಂತೆ ಆಗ್ರಹ

| Published : Jun 19 2024, 01:02 AM IST

ಸಾರಾಂಶ

ಸ್ಟಾಂಪ್ ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ, ಆಸ್ತಿ ಕಂದಾಯ, ವಾಹನಗಳ ನೋಂದಣಿ ಶುಲ್ಕ, ಛಾಪಾ ಕಾಗದ ಬೆಲೆ ಈಗಾಗಲೇ ಹೆಚ್ಚಾಗಿದೆ, ಕಾರ್ಮಿಕರ ಕೂಲಿ, ಸಂಬಳಗಳು ಜಾಸ್ತಿಯಾಗಿವೆ, ಈಗಾಗಲೇ 2024 ಏಪ್ರಿಲ್ ಒಂದರಿಂದ ಟ್ರೇಡ್ ಲೈಸನ್ಸ್ ಶುಲ್ಕ ಶೇ. 2೦ರಷ್ಟು ಹೆಚ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅನೇಕ ಗ್ಯಾರಂಟಿ, ಕೊಡುಗೆಗಳು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೀಸೆಲ್ ಹಾಗೂ ಪೆಟ್ರೊಲ್ ಬೆಲೆ ಹೆಚ್ಚಳ ಕೈಬಿಡಬೇಕೆಂದು ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಒತ್ತಾಯಿಸಿದ್ದಾರೆ.

ತೈಲ ಬೆಲೆ ಏರಿಕೆಯಿಂದಾಗಿ ಸಾಗಾಣಿಕೆ ವೆಚ್ಚ ದುಬಾರಿಯಾಗಿ ಎಲ್ಲ ದಿನಸಿ ಪದಾರ್ಥಗಳು, ಅಕ್ಕಿ, ಬೇಳೆ ಕಾಳುಗಳು, ಹಣ್ಣು, ತರಕಾರಿ ,ಹಾಲು ಮತ್ತಿತರ ಅನೇಕ ಪದಾರ್ಥಗಳು ದುಬಾರಿಯಾಗಿ ಜನಜೀವನ ಮಾಡಲು ತುಂಬಾ ತೊಂದರೆಯಾಗಿ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಟಾಂಪ್ ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ, ಆಸ್ತಿ ಕಂದಾಯ, ವಾಹನಗಳ ನೋಂದಣಿ ಶುಲ್ಕ, ಛಾಪಾ ಕಾಗದ ಬೆಲೆ ಈಗಾಗಲೇ ಹೆಚ್ಚಾಗಿದೆ, ಕಾರ್ಮಿಕರ ಕೂಲಿ, ಸಂಬಳಗಳು ಜಾಸ್ತಿಯಾಗಿವೆ, ಈಗಾಗಲೇ 2024 ಏಪ್ರಿಲ್ ಒಂದರಿಂದ ಟ್ರೇಡ್ ಲೈಸನ್ಸ್ ಶುಲ್ಕ ಶೇ. 2೦ರಷ್ಟು ಹೆಚ್ಚಿಸಲಾಗಿದೆ, ಮಳೆ ಬೆಳೆ ಇಲ್ಲದೇ ಮಳೆ ಬಿದ್ದು ಅತಿವೃಷ್ಟಿಯಾಗಿ ತರಕಾರಿಗಳು, ಹಣ್ಣು ಹಂಪಲು, ಹೂ, ಸೊಪ್ಪುಗಳು ವಿಪರೀತ ಏರಿಕೆಯಾಗಿ ಹೋಟೆಲ್ ಉದ್ಯಮ ನಡೆಸಲು ತುಂಬಾ ತೊಂದರೆಯಾಗಿದೆ. ಇನ್ನು ಬಸ್ ದರಗಳು ಹೆಚ್ಚಾಗಬಹುದೆಂದು ಭಾವಿಸಿ ಆತಂಕವಾಗಿದೆ. ನಮ್ಮ ರಾಜ್ಯದ ಜನ ಜೀವನ ಮಾಡಲು ಬಹಳ ತೊಂದರೆಗೊಳುಪಡುತ್ತಾರೆ ಎಂದು ಅವರು ಹೇಳಿದ್ದಾರೆ.

ಅದರಲ್ಲೂ ಪ್ರತಿಯೊಂದು ಪದಾರ್ಥಗಳಿಗೂ ಏನೇ ಖರೀದಿ ಮಾಡಿದರೂ ಜಿಎಸ್ಟಿ ಬೆಂಬಿಡದೇ ನಮ್ಮ ಹಿಂದೇನೆ ನಿಂತಂತೆ ಇರುತ್ತಿದೆ. ಇವೆಲ್ಲ ಸರಿದೂಗಿಸಿ ವ್ಯಾಪಾರ ಮಾಡುವುದು ಕಷ್ಟವಾಗಿದೆ, ಆರ್ಥಿಕ ಹೊರೆ ಹೊರಲಾರದಂತಾಗಿದೆ,

ಆದ್ದರಿಂದ ತೈಲ ಬೆಲೆ ಏರಿಕೆ ನಿರ್ಧಾರವನ್ನು ಪುನರ್ ಪರಿಶೀಲಿಸಿ ಕೈಬಿಡಬೇಕು ಎಂದು ಅವರು ಕೋರಿದ್ದಾರೆ.