ಸಾರಾಂಶ
ಪ್ರತಿದಿನ ನೌಕರರ ಸಂಖ್ಯೆಯು ಕಡಿಮೆಯಾಗಿ ಕೆಲಸವು ಹೆಚ್ಚಾಗುತ್ತಿದೆ. ಇಂದಿನಿಂದ ಶಾಸಕರು ಮತ್ತು ಸಚಿವರಿಗೆ ಆಯಾ ಭಾಗದಲ್ಲಿ ಮನವಿ ನೀಡುವ ಉದ್ದೇಶದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದರೆ ನಮ್ಮ ಕೆಲಸವನ್ನು ನಿಲ್ಲಿಸುತ್ತೇವೆ. ಸ್ವಚ್ಛತೆಗೆ ನಾವು ಬರುವುದಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಗುತ್ತಿಗೆ ಕಾರ್ಮಿಕರನ್ನು ಗ್ರಾಪಂ ನೌಕರಂತೆ ಪರಿಗಣಿಸಿ ಸರ್ಕಾರ ಸಂಬಳ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕಾರ್ಯಕರ್ತರು ನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪೌರ ಸೇವಾ ಕಾರ್ಮಿಕರಿಗೆ ಸಂಜೀವಿನಿ ಯೋಜನೆ ಜಾರಿಗೆ ತರಬೇಕು. ನಗದು ರಹಿತ ಚಿಕಿತ್ಸೆ ನೀಡಬೇಕು. ಕೋವಿಡ್ ವೇಳೆ ನಾವು ಕೆಲಸ ಮಾಡಿದ್ದೇವೆ. ಅದೆಲ್ಲವನ್ನೂ ಪರಿಗಣಿಸಿ ನಮ್ಮ ಸೇವೆಗಳನ್ನು ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಜ್ಯೋತಿ ಸಂಜೀವಿನಿ ಯೋಜನೆ ನಮ್ಮ ಪೌರ ಸೇವಾ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಅದನ್ನು ಸರ್ಕಾರ ನೀಡಲು ಕ್ರಮ ವಹಿಸಬೇಕು. ಪೌರ ಕಾರ್ಮಿಕರಿಗೆ ಸರ್ಕಾರವು ನಗರಸಭೆಯಿಂದ ಸಂಬಳ ಕೊಡಿ ಎಂದು ಹೇಳುವುದನ್ನು ಸರ್ಕಾರ ಬಿಡಬೇಕು ಎಂದು ಆಗ್ರಹಿಸಿದರು.ಕೆಲವು ಮುನ್ಸಿಪಾಲಿಟಿಗಳು ಆರ್ಥಿಕವಾಗಿಲ್ಲ. ಆದ್ದರಿಂದ ಅವರು ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಳ ಕೊಡುವುದಾದದೂ ಹೇಗೆ. ಅದೆಲ್ಲವನ್ನು ಗಮನಿಸಿ ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸಬೇಕು. ಗ್ರಾಪಂ ನೌಕರಂತೆ ಪರಿಗಣಿಸಿ ಸರ್ಕಾರ ಸಂಬಳ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿದಿನ ನೌಕರರ ಸಂಖ್ಯೆಯು ಕಡಿಮೆಯಾಗಿ ಕೆಲಸವು ಹೆಚ್ಚಾಗುತ್ತಿದೆ. ಇಂದಿನಿಂದ ಶಾಸಕರು ಮತ್ತು ಸಚಿವರಿಗೆ ಆಯಾ ಭಾಗದಲ್ಲಿ ಮನವಿ ನೀಡುವ ಉದ್ದೇಶದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದರೆ ನಮ್ಮ ಕೆಲಸವನ್ನು ನಿಲ್ಲಿಸುತ್ತೇವೆ. ಸ್ವಚ್ಛತೆಗೆ ನಾವು ಬರುವುದಿಲ್ಲ. ಇದಕ್ಕೆ ಅವಕಾಶ ಮಾಡಿಕೊಡದೇ ಬೇಡಿಕೆ ಈಡೇರಿಸಬೇಕು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಂಘದ ನಾಗರಾಜು, ಕಲ್ಪನಾ, ರವಿಕುಮಾರ್, ರಾಜೇಗೌಡ, ಮಂಜುನಾಥ್, ಮಹದೇವು, ಸೋಮಸುಂದರ್, ಚಂದ್ರ, ಲಿಂಗಮ್ಮಯ್ಯ, ಮಂಜು, ನಂಜುಂಡಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.