ಪಕ್ಷ, ಜಾತಿ, ಧರ್ಮಾತೀತವಾಗಿ ಜಿಲ್ಲೆಯ ಜನರು ಹೋರಾಟಕ್ಕೆ ಬೆಂಬಲ ನೀಡಿ, ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಆದರೂ ಈ ಯೋಜನೆ ಮುಂದುವರಿದಿದ್ದು, ಬೇಡ್ತಿ(ಗಂಗಾವಳಿ)- ವರದಾ ನದಿ ತಿರುವು ಯೋಜನೆಯಂತೂ ಡಿಪಿಆರ್ ಹಂತ ತಲುಪಿದೆ.
ಯಲ್ಲಾಪುರ: ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹಿಸಿ ಯಲ್ಲಾಪುರ ರಸ್ತೆತಡೆ ಸಂಚಾಲನಾ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.ಬೇಡ್ತಿ ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ, ಬಯಲುಸೀಮೆಗೆ ನೀರು ಕೊಂಡೊಯ್ಯುವ ಬೃಹತ್ ನದಿ ಜೋಡಣೆ ಯೋಜನೆಗಳನ್ನು ಸರ್ಕಾರಗಳು ಕೈಗೊಳ್ಳುತ್ತಿವೆ. ಇಲ್ಲಿನ ಕೃಷಿ, ಪರಿಸರ, ನೀರಿನ ಲಭ್ಯತೆ, ಪರಿಸರ ಹಾಗೂ ಜನಜೀವನಕ್ಕೆ ಇದು ಮಾರಕವಾಗಲಿದೆ.ಪಕ್ಷ, ಜಾತಿ, ಧರ್ಮಾತೀತವಾಗಿ ಜಿಲ್ಲೆಯ ಜನರು ಹೋರಾಟಕ್ಕೆ ಬೆಂಬಲ ನೀಡಿ, ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಆದರೂ ಈ ಯೋಜನೆ ಮುಂದುವರಿದಿದ್ದು, ಬೇಡ್ತಿ(ಗಂಗಾವಳಿ)- ವರದಾ ನದಿ ತಿರುವು ಯೋಜನೆಯಂತೂ ಡಿಪಿಆರ್ ಹಂತ ತಲುಪಿದೆ. ಇದೀಗ ಯೋಜನೆಯ ಸ್ಥಳ ಸರ್ವೇ ಮಾಡಲು ಖಾಸಗಿ ಕಂಪನಿಯೊಂದಕ್ಕೆ ಟೆಂಡರ್ ಕೂಡ ನೀಡಲಾಗಿದೆ ಎಂದರು.
ಮನವಿ ಸ್ವೀಕರಿಸಿದ ಸಚಿವ ಜೋಶಿ, ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು. ರಾಜ್ಯ ಸರ್ಕಾರ ಸರಿಯಾಗಿ ಅಧ್ಯಯನ ನಡೆಸದೇ ದುಡುಕಿ ಯೋಜನೆ ಅನುಷ್ಠಾನಗೊಳಿಸಬಾರದು. ಕೇಂದ್ರದ ಮಟ್ಟದಲ್ಲಿ ನಾವೂ ಯೋಜನೆ ಕೈಬಿಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ, ಸಂಚಾಲಕರಾದ ನರಸಿಂಹ ಸಾತೊಡ್ಡಿ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿ.ಟಿ. ಹೆಗಡೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ರಾಘವೇಂದ್ರ ಭಟ್ಟ ಹಾಸಣಗಿ, ಕೆ.ಟಿ. ಹೆಗಡೆ, ನಾಗರಾಜ ಕವಡಿಕೇರಿ, ಸುಬ್ಬಣ್ಣ ಉದ್ದಾಬೈಲ್, ರಘುಪತಿ ಹೆಗಡೆ ಇತರರಿದ್ದರು.