ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಜಿಲ್ಲೆಯ ಜಂಗಮಕೋಟೆ ಹೋಬಳಿಯಲ್ಲಿ ಸ್ಥಾಪನೆ ಆಗಲಿರುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆಗೆ ಅಡ್ಡಿಪಡಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಮ್ಮ ಹಿಂದೆ ಕೆಲವು ರೌಡಿಗಳನ್ನು ಇಟ್ಟುಕೊಂಡು ಒಂದೆಡೆ ರೈತರು ಮತ್ತೊಂದೆಡೆ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿರುವುದರಿಂದ ಅವರನ್ನು ರೌಡಿಪಟ್ಟಿಗೆ ಸೇರಿಸಬೇಕು ಎಂದು ದಸಂಸ ಮುಖಂಡ ರಾಮಾಂಜಿನಪ್ಪ ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಆಗಲಿ ಎನ್ನುವವರ ಸಂಖ್ಯೆ ಶೇ.73ರಷ್ಟಿದ್ದರೆ, ಬೇಡ ಎನ್ನುವವರ ಸಂಖ್ಯೆ ಕೇವಲ 23 ರಷ್ಟು ಮಾತ್ರ. ಸ್ವಯಂ ಪ್ರೇರಣೆಯಿಂದ ಕೈಗಾರಿಕೆಗೆ ಭೂಮಿ ಕೊಡಲು ಮುಂದೆ ಬಂದಿರುವ, ಬರುವ ರೈತರಿಗೆ ಬೆದರಿಕೆ ಹಾಕುವುದು, ಸರ್ವೇಗೆ ಬರುವ ಅಧಿಕಾರಿಗಳ ಮೇಲೆ ತನ್ನ ಬಳಿಯಿರುವ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸುವುದು ಇವರ ಕೆಲಸವಾಗಿದೆ ಎಂದು ಅವರು ದೂರಿದರು.

ನಡಿಪಿನಾಯಕನಹಳ್ಳಿ ಗ್ರಾಮದ ರೈತ ಚೆನ್ನಕೃಷ್ಣಪ್ಪ 2024ರಲ್ಲಿ ತಾನು ಖರೀದಿಸಿರುವ ಭೂಮಿಯ ಅಳತೆ ಮಾಡಿಸಲು ಸರ್ವೇಯರ್‌ಗಳನ್ನು ಕರೆದುಕೊಂಡು ಹೋಗಿದ್ದಾಗ ಕೆಐಎಡಿಬಿಗೆ ಭೂಮಿ ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬೈರೇಗೌಡರ ಕಡೆಯವರಾದ ಅಜಿತ್ ಕುಮಾರ್, ದೇವರಾಜ್, ಭರತ್ ತಂಡ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಚೆನ್ನಕೃಷ್ಣಪ್ಪ ಜಾತಿ ನಿಂದನೆ ದೂರು ಕೊಟ್ಟರೆ ಪೊಲೀಸರು ದೂರು ದಾಖಸಿಲ್ಲ. ಪೊಲೀಸರ ಎದುರೇ ಪೆಟ್ರೋಲ್ ಹಾಕಿ ಸುಡುವ ಬೆದರಿಕೆ ಹಾಕಿದ್ದಾರೆ. ಆಗ ಸಬ್ ಇನ್‌ಸ್ಪೆಕ್ಟರ್ ನಾಗರಾಜ್ ಸುಟ್ಟು ಹಾಕು ಎಫ್‌ಐಆರ್ ಮಾಡುತ್ತೇನೆ ಎನ್ನುತ್ತಾರೆ. ಹೀಗಾಗಿ ಬೈರೇಗೌಡ ನಿರಂತರವಾಗಿ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಪೊಲೀಸ್ ಕ್ರಮ ಆಗಿಲ್ಲ. ರೈತ ಸಂಘದ ಮುಖಂಡರು ರೈತರ ಕೆಲಸ ಮಾಡಬೇಕೇ ವಿನಃ ರೌಡಿ ವರ್ತನೆ ತೋರುವುದಲ್ಲ. ಇದೇನಾ ರೈತರ ಹೋರಾಟ ಎಂದು ಪ್ರಶ್ನಿಸಿದರು.

ಶಿಡ್ಲಘಟ್ಟ ತಾಲೂಕು ಕಚೇರಿ ಎದುರು ಕೆಐಎಡಿಬಿ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಬಹಿರಂಗವಾಗಿ ಕೆಐಎಡಿಬಿಗೆ ಭೂಮಿ ಕೊಡುವ ರೈತರನ್ನು ಹೆದರಿಸಿ, ನೀವು ಭೂಮಿ ಕೊಟ್ಟರೆ ನಾವು ನಕ್ಸಲೈಟ್ ಆಗಬೇಕಾಗುತ್ತದೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದಕ್ಕೆ ಇಡೀ ತಾಲೂಕು ಕಚೇರಿ ಸಾಕ್ಷಿಯಿದೆ. ರೈತರನ್ನು ರೈತರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬೈರೇಗೌಡ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇವರನ್ನು ರೌಡಿಶೀಟರ್ ಮಾಡಬೇಕು ಎಂದು ಒತ್ತಾಯಿಸಿದರು.


ಹೈಡ್ರಾಮಕ್ಕೆ ನೇರ ಕಾರಣ:

ಏ.29 ರಂದು ಜಿಲ್ಲಾಡಳಿತ ಭವನದ ಎದುರು ನಡೆದ ಹೈಡ್ರಾಮಕ್ಕೆ ನೇರ ಕಾರಣ ಇದೇ ಭೈರೇಗೌಡರ ಚೇಲಾಗಳಾದ ಭರತ್, ಅಜಿತ್, ದೇವರಾಜ್ ಆಗಿದ್ದಾರೆ. ಕಾನೂನು ಪಾಲನೆಗೆ ನಿಂತಿದ್ದ ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ್ದೇ ಘಟನೆಗೆ ಮೂಲ ಕಾರಣವಾಗಿದೆ. ಬ್ಯಾರಿಕೇಡ್‌ಗಳನ್ನು ಎಸೆದಿದ್ದು ಕೂಡ ಇದೇ ರೈತರೇ ಆಗಿದ್ದಾರೆ. ಆದರೆ ಮಾಧ್ಯಮಗಳಿಗೆ ಪೊಲೀಸರು ಹೊಡೆದಂತೆ ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ತಂದಿರುವ, ರೈತರಿಗೆ ಬೆದರಿಕೆ ಹಾಕುವ ರೈತಸಂಘದ ಭೈರೇಗೌಡ ಮತ್ತು ಸಹಚರರ ಮೇಲೆ ರೌಡಿಶೀಟರ್ ಖಾತೆ ತೆರೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ 13 ಹಳ್ಳಿಗಳ ಕೆಐಎಡಿಬಿ ಪರ ಹೋರಾಟದ ಮುಖಂಡರು ಸಾಮೂಹಿಕ ಸಂಘಟನೆಯ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯ ಉಪಾಧ್ಯಕ್ಷ ಡಿ.ಕೆ.ಮುನಿಕೆಂಪಣ್ಣ, ಕದಸಂಸ ಮುಖಂಡ ರಾಮಾಂಜಿ. ನವೀನ್ ಕುಮಾರ್, ಪ್ರಭು, ಪ್ರಮೋದ್, ನಾಗರಾಜ, ಮಧು, ಚಿನ್ನಪ್ಪ, ಗಂಗಾಧರ್, ಪ್ರದೀಪ ಮತ್ತಿತರರು ಇದ್ದರು.

ಸಿಕೆಬಿ-2... ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ರಾಮಾಂಜಿನಪ್ಪ ಮಾತನಾಡಿದರು.