ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆಯಲ್ಲಿನ ನಿವೇಶನ ರಹಿತರಿಗೆ ಮನೆಗಳನ್ನು ಮಂಜೂರು ಮಾಡಿ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ಸಿಪಿಐ ಮುಖಂಡರು ಮತ್ತು ಕಾರ್ಯಕರ್ತರು ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದ ವರೆಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಡಾ. ಸಿದ್ದನಗೌಡ ಪಾಟೀಲ್, ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಪ್ರಧಾನಮಂತ್ರಿ ಅವಾಸ್ ಯೋಜನೆ ಜಾರಿ ಮಾಡಿಲ್ಲ. ರಾಮನಿಗೆ ಜೀವ ಬಂತೋ ಇಲ್ಲವೋ ಗೊತ್ತಿಲ್ಲ, ಸೋರುವ ದೇವಸ್ಥಾನ ಕಟ್ಟಿದ್ದೀರಾ, ಮನೆ ಇಲ್ಲದವರಿಗೆ ಮನೆ ಕಟ್ಟಿಕೊಟ್ಟಿದ್ದರೆ ಖಂಡಿತವಾಗಿಯೂ ನಿಮಗೆ ಬೆಂಬಲ ಸಿಗುತಿತ್ತು. ಆದರೆ, ರಾಮನ ಮುಂದೆ ಭಜನೆ ಮಾಡಿದ್ದರಿಂದ ಜನರು ನಿಮ್ಮನ್ನು ಬೆಂಬಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಅವಾಸ್ ಯೋಜನೆ, ಜಗಜೀವನರಾಂ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ದೇವರಾಜ ಅರಸು ಯೋಜನೆ ಹೀಗೆ ಹಲವಾರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಇವೆ. ಈ ಎಲ್ಲಾ ಯೋಜನೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತಂದಿದ್ದರೆ, ಬಡಜನರಿಗೆ ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.ಹೆಚ್ಚಿನ ಜನರಿಗೆ ಸ್ವಂತ ವಿಳಾಸ ಇಲ್ಲ. ಪಾಕಿಸ್ಥಾನದಿಂದ ಬಂದಿರುವ ಕೆಲವು ಹಿಂದೂಗಳಿಗೆ ನಮ್ಮ ದೇಶದ ಸದಸ್ಯತ್ವ ನೀಡಿದ್ದೇವೆ ಎಂದು ಹೇಳುವ ಪ್ರಧಾನಿ ಇಲ್ಲಿರುವ ಜನರಿಗೆ ಯಾಕೆ ಮನೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಶಾಸಕರು ತಮ್ಮ ತಮ್ಮ ಆಸ್ತಿಯನ್ನು ಹೆಚ್ಚಳ ಮಾಡಿಕೊಂಡಿದ್ದಾರೆ. ಆದರೆ, ಬಡವರು ಬಡವರಾಗಿಯೇ ಉಳಿದುಕೊಂಡಿದ್ದಾರೆ. ರಾಜ್ಯದಲ್ಲಿ 2023ರಲ್ಲಿ ಸರ್ಕಾರ ನಡೆಸಿರುವ ಸರ್ವೆಯ ಪ್ರಕಾರ 40 ಲಕ್ಷ ಕುಟುಂಬಗಳಿಗೆ ನಿವೇಶನ, ಮನೆಗಳಿಲ್ಲ. ಅಂದರೆ 1.60 ಕೋಟಿ ಜನರಿಗೆ ಸ್ವಂತ ಮನೆ, ನಿವೇಶನಗಳಿಲ್ಲದೇ ಬದುಕುತ್ತಿದ್ದಾರೆ. ವಾಸ್ತವಾಗಿ 3 ಕೋಟಿ ಜನರಿಗೆ ಈ ಸವಲತ್ತು ಇಲ್ಲ ಎಂದು ಹೇಳಿದರು.ರಾಜ್ಯದಲ್ಲಿ 3 ಸಾವಿರ ಘೋಷಿತ ಕೊಳಚೆ ಪ್ರದೇಶಗಳು ಇವೆ. ಚಿಕ್ಕಮಗಳೂರು ನಗರದಲ್ಲಿ 7 ಸಾವಿರ ಜನರು ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ರಾಜ್ಯದ 7 ಕೋಟಿ ಜನರಲ್ಲಿ 3 ಕೋಟಿ ಜನರಿಗೆ ಮನೆ, ನಿವೇಶನಗಳಿಲ್ಲ. ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು. ದೇಶದ 147 ಕೋಟಿ ಜನರಲ್ಲಿ 40 ಕೋಟಿ ಜನ ಈ ರೀತಿಯ ಅತಂತ್ರದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.ಪ್ರತಿಭಟನಾ ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿ ರಹಿತ ಬಡವರ ಸಮಸ್ಯೆ ವಿಪರೀತವಾಗಿದೆ. ಕಾರ್ಮಿಕರು ತಮ್ಮ ಕೂಲಿಯ ಬಹು ಭಾಗವನ್ನು ಮನಗಳಿಗೆ ಬಾಡಿಗೆ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ತಮ್ಮದು ಎಂದು ಹೇಳಿಕೊಳ್ಳಲು ಮನೆ ಇಲ್ಲದ ಸ್ಥಿತಿಯಿದೆ. ಹೀಗಾಗಿ ಕೂಡಲೇ ವಸತಿ ರಹಿತರಿಗೆ ಮನೆ ಕಟ್ಟಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ವಸತಿ ರೈತರಿಗೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಇದುವರೆಗೂ ಯಾರೊಬ್ಬರಿಗೂ ಮನೆ ನಿರ್ಮಿಸಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಕೂಡಲೇ ರೈತರಿಗೆ ನಿವೇಶನಗಳನ್ನು ಹಂಚುವ ಮತ್ತು ಮನೆಗಳನ್ನು ನಿರ್ಮಿಸಿ ಕೊಡುವ ಕಾರ್ಯ ಆರಂಭಿಸಬೇಕು. ನಿವೇಶನ ಹಂಚಿಕೆಗೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಲು ಜಿಲ್ಲಾಡಳಿತ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ವಸತಿ ಮತ್ತು ನಿವೇಶನ ರೈತರನ್ನು ಗುರುತಿಸಲು ನಿರಂತರವಾಗಿ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಸತಿ ರಹಿತರು ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಸರ್ಕಾರಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಎಲ್ಲರಿಗೂ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಸಹ ಕಾರ್ಯದರ್ಶಿ ಜಿ. ರಘು, ಚಿಕ್ಕಮಗಳೂರು ತಾಲೂಕು ಕಾರ್ಯದರ್ಶಿ ರಮೇಶ್ ಕೆರೆಮಕ್ಕಿ, ಎಸ್. ವಿಜಯ್ ಕುಮಾರ್, ಎಚ್.ಎಂ. ರೇಣುಕಾರಾಧ್ಯ ಹಾಗೂ ಸಿಪಿಐ ಕಾರ್ಯಕರ್ತರು, ವಸತಿ ರಹಿತರು ಪಾಲ್ಗೊಂಡಿದ್ದರು.