ಇಲ್ಲಿನ ಧೂಳು ಮತ್ತು ಅದರಿಂದಾಗುವ ತೊಂದರೆಯನ್ನು ಅನುಭವಿಸುತ್ತಿರುವವರು ಸ್ಥಳೀಯರು.
ಸಂಡೂರು: ಬಳ್ಳಾರಿ ಜಿಲ್ಲೆಯ ಬಹುತೇಕ ಜನತೆ ಗಣಿ ಅವಲಂಬಿತರು. ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿನ ಕಾರ್ಖಾನೆಗಳವರು ಸ್ಥಳೀಯ ಟ್ರಾನ್ಸ್‌ಪೋರ್ಟರ್‌ಗಳಿಗೆ ಆದ್ಯತೆ ನೀಡಬೇಕು ಎಂದು ಸಂಡೂರು ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಜಯಣ್ಣ ನವಲೂಟಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಬಂಗಲೆಯಲ್ಲಿ ಬುಧವಾರ ಅವರು ಸಂಘದ ಸಭೆ ನಡೆಸಿ, ನಂತರದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದರು.ತಾಲೂಕಿನ ಬಹುತೇಕ ಜನತೆ ಗಣಿ ಅವಲಂಬಿತ ಜನರಾಗಿದ್ದಾರೆ. ಇಲ್ಲಿನ ಧೂಳು ಮತ್ತು ಅದರಿಂದಾಗುವ ತೊಂದರೆಯನ್ನು ಅನುಭವಿಸುತ್ತಿರುವವರು ಸ್ಥಳೀಯರು. ಆದರೆ, ಅದರ ಲಾಭವನ್ನು ಪಡೆಯುವವರು ಬೇರೆಯವರು ಎನ್ನುವಂತಾಗಿದೆ. ಕಾರ್ಖಾನೆಗಳವರು ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅದಿರು ಸಾಗಾಣಿಕೆಗೆ ಸ್ಥಳೀಯ ಅದಿರು ಸಾಗಾಣಿಕೆ ಗುತ್ತಿಗೆದಾರರಿಗೆ ಅವಕಾಶ ಕೊಡುತ್ತಿಲ್ಲ ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿನ ಕಾರ್ಖಾನೆಗಳವರು ೨೦೨೪ರ ಕೈಗಾರಿಕಾ ನೀತಿ ಹಾಗೂ ಎಂಎಂಡಿಆರ್ (ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ)ಗಳ ಪ್ರಕಾರ ಲಾರಿ ಮಾಲೀಕರ ಮತ್ತು ಸಾಗಾಣಿಕೆದಾರರ ದರ ನಿಗದಿ ಮಾಡಬೇಕು. ತಾಲ್ಲೂಕಿನ ಗಣಿಗಳಿಂದ ಅದಿರು ಖರೀದಿಸಿದ ಯಾವುದೇ ಕಾರ್ಖಾನೆಗಳು ಸ್ಥಳೀಯರ ಆರೋಗ್ಯ, ಶಿಕ್ಷಣ, ಉದ್ಯೋಗ, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಬೇಕು. ಅದಿರು ಸಾಗಾಣಿಕೆ ಮಾಡಿ ಬಿಲ್ ಸಲ್ಲಿಸಿದ ೩೦ ದಿನಗಳ ಒಳಗಾಗಿ ಅದಿರು ಸಾಗಾಣಿಕೆದಾರರಿಗೆ ಬಿಲ್ ಹಣವನ್ನು ಪಾವತಿಸಬೇಕು. ಕಾರ್ಖಾನೆ ಮಾಲೀಕರು ಯಾವುದೇ ಲಾಬಿಗಳಿಗೆ ಮಣಿದು ಕಡಿಮೆ ದರದಲ್ಲಿ ಸಾಗಾಣಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಬಾರದು. ಅದಿರು ಸಾಗಾಣಿಕೆದಾರರ ಸಂಘದ ಸದಸ್ಯರು ಕಾರ್ಖಾನೆಗಳಿಗೆ ಬಂದಾಗ, ಅವರನ್ನು ಗೇಟಿನ ಬಳಿ ತಡೆದು ಸೆಕ್ಯೂರಿಟಿ ಮುಖಾಂತರ ಮನವಿ ಸ್ವೀಕರಿಸುವುದನ್ನು ನಿಲ್ಲಿಸಿ, ಕಾರ್ಖಾನೆಗಳ ಆಡಳಿತಾಧಿಕಾರಿಗಳೇ ಗೌರವಪೂರ್ವಕವಾಗಿ ಮನವಿ ಸ್ವೀಕರಿಸಬೇಕು. ಕಾರ್ಖಾನೆಗಳವರು ಸ್ಥಳೀಯರಿಗೆ ಅದಿರು ಸಾಗಾಣಿಕೆಗೆ ಅವಕಾಶ ನೀಡದಿದ್ದಲ್ಲಿ, ಸಂಘದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಭೆಯಲ್ಲಿ ಅದಿರು ಸಾಗಾಣಿಕೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಎ. ಪಂಪಾಪತಿ, ಉಪಾಧ್ಯಕ್ಷರಾದ ವಾಮದೇವ ಮದ್ದಾನಿ, ಈಶಣ್ಣ ಉಬ್ಬಲಗಂಡಿ, ರಾಘವೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಮೇಶ ಗಡಾದ್, ಸಂಘಟನಾ ಕಾರ್ಯದರ್ಶಿ ನಾಗರಾಜ ಸುಶೀಲಾನಗರ, ಸದಸ್ಯರಾದ ಹನುಮೇಶ್ ನಂದಿಹಳ್ಳಿ, ಭೋಗೇಶ್ ರೆಡ್ಡಿ, ಟಿ. ಸಂದೀಪ, ಶ್ರೀನಿವಾಸ, ಮುಖಂಡರಾದ ಮಲ್ಲಿಕಾರ್ಜುನ, ಎಚ್. ಮರಿಸ್ವಾಮಿ, ಪಕ್ಕೀರಪ್ಪ, ಶಂಕ್ರಣ್ಣ, ರಮೇಶ್ ಧರ್ಮಾಪುg ಮುಂತಾದವರು ಉಪಸ್ಥಿತರಿದ್ದರು.