ಕಾಯಂ ಪಿಡಿಒ ಬೇಡಿಕೆ, ಕೂಡಲ ಗ್ರಾಪಂ ಕಚೇರಿಗೆ ಬೀಗ

| Published : Oct 09 2025, 02:01 AM IST

ಸಾರಾಂಶ

ಹಾನಗಲ್ಲ ತಾಲೂಕಿನ ಕೂಡಲ ಗ್ರಾಮ ಪಂಚಾಯಿತಿಗೆ ಕಾಯಂ ಅಭಿವೃದ್ಧಿ ಅಧಿಕಾರಿ ಬೇಕು, ಮಹಿಳಾ ಅಭಿವೃದ್ಧಿ ಅಧಿಕಾರಿ ಪ್ರಭಾರ ಕಳುಹಿಸಿರುವುದು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರು.

ಹಾನಗಲ್ಲ: ತಾಲೂಕಿನ ಕೂಡಲ ಗ್ರಾಮ ಪಂಚಾಯಿತಿಗೆ ಕಾಯಂ ಅಭಿವೃದ್ಧಿ ಅಧಿಕಾರಿ ಬೇಕು, ಮಹಿಳಾ ಅಭಿವೃದ್ಧಿ ಅಧಿಕಾರಿ ಪ್ರಭಾರ ಕಳುಹಿಸಿರುವುದು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದರು.

ಬುಧವಾರ ಹಾನಗಲ್ಲ ತಾಲೂಕಿನ ಕೂಡಲ ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದ ಸಂದರ್ಭದಲ್ಲಿ ತಾಪಂ ಅಧಿಕಾರಿ ದೀಪಕ್ ದೇಸಾಯಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಮನವಿ ಸ್ವೀಕರಿಸಿ, ಸಮಸ್ಯೆ ಪರಿಹಾರಕ್ಕೆ ಕಾಲವಕಾಶ ಕೇಳಿದರು. ಆನಂತರ ಬೀಗ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಮಾಲತೇಶಸೊಪ್ಪಿನ, ಕೂಡಲ ಪಿಡಿಒ ವರ್ಗಾವಣೆಯಾಗಿ 20 ದಿನಗಳಾದರೂ ಬೇರೆ ಪಿಡಿಒ ನೇಮಕ ಮಾಡಿಲ್ಲ. ಇಲ್ಲಿನ ಸಾರ್ವಜನಿಕರಿಗಾದ ತೊಂದರೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಾರನಬೀಡ ಪಿಡಿಒ ಅವರನ್ನು ಪ್ರಭಾರ ಎಂದು ನೇಮಿಸಿದ್ದರೂ ಅವರು ಬಂದು ಹಾಜರಾಗಿಲ್ಲ. ನಾವು ಪ್ರತಿಭಟನೆ ಆರಂಭಿಸಿದ ಮೇಲೆ ಅವರು ಹಾಜರಾಗಲು ಬಂದರು. ನಮಗೆ ಪ್ರಭಾರ ಬೇಡ, ಕಾಯಂ ಪಿಡಿಒ ಬೇಕು. 16 ಗ್ರಾಪಂ ಸದಸ್ಯರಿರುವ ದೊಡ್ಡ ಗ್ರಾಪಂ ಆಗಿದ್ದರಿಂದ ಎರಡು ಮೂರು ಪಂಚಾಯಿತಿ ಪ್ರಭಾರ ಇದ್ದವರು ಇಲ್ಲಿ ಕೆಲಸ ಮಾಡಲಾಗದು. ಕಾಯಂ ಪಿಡಿಒ ನೇಮಕ ಮಾಡದಿದ್ದರೆ ಮತ್ತೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ಈಗ ಅಧಿಕಾರಿಗಳು ಒಂದು ವಾರದಲ್ಲಿ ನೀಡಿರುವ ಕಾಲವಕಾಶದಲ್ಲಿ ಕಾಯಂ ಪಿಡಿಒ ನೇಮಕ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು.

ಚಂದ್ರು ಹರಿಜನ, ಗುರುನಂಜಪ್ಪ ಮಾವಿನಮರದ, ಶಂಭುಲಿಂಗನಗೌಡ ಮುದ್ದನಗೌಡ್ರ, ಷಣ್ಮುಖಪ್ಪ ಹರವಿ, ನಾಗರಾಜ ಸೊಪ್ಪಿನ, ನಾಗನಗೌಡ ಮುದಿಗೌಡ್ರ, ಸಂಗಪ್ಪ ಹಾವೇರಿ, ಪ್ರವೀಣ ಹರವಿ, ಮಲ್ಲೇಶಪ್ಪ ಮಾವಿನಮರುದ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

ಇದು ಅನಿವಾರ್ಯ: ಈ ಕುರಿತು ಪ್ರತಿಕ್ರಿಯೆ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ನಾವು ಪ್ರಭಾರ ಕಾರ್ಯಕ್ಕೆ ಕಳಿಸಿದ ಪಿಡಿಒ ಬೇಡ ಎಂದು ಅಲ್ಲಿನ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕಾಯಂ ಪಿಡಿಒ ಬೇಕು ಎಂಬುದು ಅವರ ಬೇಡಿಕೆಯಾಗಿದೆ. ಆದರೆ ಹಾನಗಲ್ಲ ತಾಲುಕಿನಲ್ಲಿ 42 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟ 18 ಪಿಡಿಒ ಕೊರತೆ ಇದೆ. ನಾವು ನಿಯೋಜನೆ ಮಾಡಿದ ಪಿಡಿಒ ಅಲ್ಲಿ ಸೇವೆ ಸಲ್ಲಿಸಲು ತೊಂದರೆ ಮಾಡಬಾರದು. ಇದು ಅನಿವಾರ್ಯವಾದ ಕಾರ್ಯ. ಅದಾಗ್ಯೂ ಕೂಡಲ ಗ್ರಾಪಂಯ ಸಾರ್ವಜನಿಕರ ಬೇಡಿಕೆಯನ್ನು ಹಾವೇರಿ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.