ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಹಾಗೂ ಅನೈತಿಕ ಚಟುವಟಿಕೆಗಳಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಸಂಡೂರು: ಬಳ್ಳಾರಿಯಲ್ಲಿ ನಡೆದ ಗಲಭೆಗೆ ಕಾರಣರಾದವರನ್ನು ಬಂಧಿಸಿ, ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿರುವ ಅಶಾಂತಿ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಂತೆ ಕೋರಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ತಾಲ್ಲೂಕು ಸಮಿತಿ ಮುಖಂಡರು ಮಂಗಳವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ರಾಜ್ಯಪಾಲಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸಿಪಿಐಎಂ ಪಕ್ಷದ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ವಿ.ಎಸ್. ಶಿವಶಂಕರ ಮುಂತಾದವರು ಮನವಿ ಪತ್ರ ಸಲ್ಲಿಸಿ, ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ನಡೆದ ಗಲಾಟೆ, ಗಲಭೆ, ಮತ್ತೆ ತಲೆ ಎತ್ತಿರುವ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಹಾಗೂ ಅನೈತಿಕ ಚಟುವಟಿಕೆಗಳಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಜ.೩ ರಂದು ನಡೆದ ಗಲಭೆಯಲ್ಲಿ ರಾಜಶೇಖರ ಎಂಬ ವ್ಯಕ್ತಿ ಗುಂಡಿನ ದಾಳಿಯಿಂದಾಗಿ ಮೃತಪಟ್ಟಿದ್ದಾನೆ. ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ನೇರವಾಗಿ ಗಲಭೆಯಲ್ಲಿ ಭಾಗವಹಿಸಿ, ಪ್ರಚೋದನೆ ನೀಡಿ, ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ, ಕಾನೂನು ಸುವ್ಯವಸ್ಥೆ ಹಾಳುಮಾಡಿದ್ದಾರೆ ಎಂದು ದೂರಿದರು. ಇತ್ತೀಚೆಗೆ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಬಯಲಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸ್ಥಳೀಯ ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸಿ, ಉನ್ನತ ಮಟ್ಟದ ತನಿಖೆಯನ್ನು ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗಲಭೆಯಲ್ಲಿ ಮೃತಪಟ್ಟ ರಾಜಶೇಖರ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಿ, ಜನರಲ್ಲಿನ ಭಯ ಮತ್ತು ಆತಂಕವನ್ನು ಹೋಗಲಾಡಿಸಬೇಕು. ಸರ್ಕಾರದಿಂದಲೇ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎ. ಸ್ವಾಮಿ, ಹೆಚ್. ಸ್ವಾಮಿ, ಖಲಂದರ್ ಬಾಷ, ಪಂಪನಗೌಡ ಕುರೆಕುಪ್ಪ, ಎಸ್. ಕಾಲುಬಾ ಮುಂತಾದವರು ಉಪಸ್ಥಿತರಿದ್ದರು. ಸಂಡೂರಿನಲ್ಲಿ ಮಂಗಳವಾರ ಸಿಪಿಐ(ಎಂ) ಪಕ್ಷದ ಮುಖಂಡರು ತಹಶಿಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.